Greater Bengaluru News9 : ದೇವೇಗೌಡರ ಅದೃಷ್ಟದೇವತೆ, 72 ವರ್ಷಗಳ ಕಾಲ ಸಾಥಿಯಾಗಿದ್ದ ಚೆನ್ನಮ್ಮ (Chennamma) ಅವರ ಅಂತ್ಯಕ್ರಿಯೆ ಸೋಮವಾರ ಹರದನಹಳ್ಳಿ ಸಮೀಪದ ಕ್ಯಾತನಹಳ್ಳಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.
ಶನಿವಾರ ರಾತ್ರಿಯಿಂದ ಇಂದು ಮಧ್ಯಾಹ್ನದವರೆಗೆ ಬೆಂಗಳೂರಿನ (Bengaluru) ಪದ್ಮನಾಭನಗರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಜಕಾರಣಿಗಳು, ಸಿನಿಮಾಮಂದಿ, ಸ್ವಾಮೀಜಿಗಳು, ಸಾರ್ವಜನಿಕರು ದರ್ಶನ ಪಡೆದರು. ಈ ವೇಳೆ, ಪತ್ನಿಯ ಮುಖ ನೋಡುತ್ತಾ ದೇವೇಗೌಡರು (HD Devegowda) ಕಣ್ಣೀರು ಹಾಕಿದರು. ಇನ್ನೂ ಕುಮಾರಸ್ವಾಮಿ, ರೇವಣ್ಣ ಕಣ್ಣೀರ ಸಾಗರದಲ್ಲಿ ಮಿಂದಿದ್ದಾರೆ. ಗಣ್ಯರು ಅಂತಿಮ ದರ್ಶನ ಪಡೆದ ಬಳಿಕ ಪಾರ್ಥಿವ ಶರೀರವನ್ನು ಹಾಸನಕ್ಕೆ ಕೊಂಡೊಯ್ಯಲಾಗುತ್ತಿದೆ.
ಪಾರ್ಥಿವ ಶರೀರ ಕೊಂಡೊಯ್ಯುವ ವೇಳೆ ಮಾರ್ಗಮಧ್ಯದ ಕೆಲ ಗ್ರಾಮಸ್ಥರಿಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಪಾರ್ಥೀವ ಶರೀರ ಮರೂರು ಹ್ಯಾಂಡ್ ಪೋಸ್ಟ್‌ಗೆ ಆಗಮಿಸುತ್ತಿದ್ದಂತೆ ಮರೂರು, ಕುಣಿಗಲ್ ರಸ್ತೆಯ ಅಂಚೆಪಾಳ್ಯ ಗ್ರಾಮಸ್ಥರೂ ಅಂತಿಮ ನಮನ ಸಲ್ಲಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ನಿಂತ ಗ್ರಾಮಸ್ಥರು ಚೆನ್ನಮ್ಮರ ಅಂತಿಮ ದರ್ಶನ ಪಡೆದರು. ಇದೇ ವೇಳೆ ಪುಷ್ಪ ನಮನ ಸಲ್ಲಿಸಿದರು. ದೇವೇಗೌಡರನ್ನೂ ನೋಡಿ ಭಾವುಕರಾಗಿದ್ದಾರೆ. ಅಂತಿಮ ದರ್ಶನಕ್ಕೆ ಬಂದ ಗ್ರಾಮಸ್ಥರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕೈಮುಗಿದು ಧನ್ಯವಾದ ಅರ್ಪಿಸಿದ್ದಾರೆ.


