BBMP
Loading ...

hasanamb1

Greater Bengaluru News9 : ಈ ಬಾರಿ ಹಾಸನಾಂಬ ದೇವಿ ದರ್ಶನವನ್ನು ಭಕ್ತಾದಿಗಳಿಗೆ ಸುರಕ್ಷಿತ ಹಾಗೂ ಸುಗಮವಾಗಿ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು, ತಂತ್ರಜ್ಞಾನದ ಮೊರೆ ಹೋಗಲು ತೀರ್ಮಾನಿಸಿದೆ.

ಹಾಸನಾಂಬ ಜಾತ್ರೋತ್ಸವ ಅ.29ರಿಂದ ನ.11ರವರೆಗೆ ನಡೆಯಲಿದ್ದು, ಪ್ರಥಮ ದಿನ ಅ.29 ಮತ್ತು ಅಂತಿಮ ದಿನ ನ.11 ಹೊರತುಪಡಿಸಿ 11 ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದೆ. ಈ ಬಾರಿಯೂ 20 ರಿಂದ 25 ಲಕ್ಷ ಭಕ್ತರು ಆಗಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸುಗಮ ದರ್ಶನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಾನಾ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಪ್ರಮುಖವಾಗಿ ಆನ್‌ಲೈನ್‌ನಲ್ಲಿ ನೋಂದಣಿ ಜತೆಗೆ ವೆಬ್‌ಸೈಟ್‌ ಮೂಲಕ ಮುಂಚಿತವಾಗಿ ದೇಗುಲದ ಬಾಗಿಲು ತೆರೆಯುವ ಹಾಗೂ ಮಧ್ಯಾಹ್ನದ ವೇಳೆ ಪೂಜೆಗಾಗಿ ಮುಚ್ಚುವ ಸಮಯ ಸೇರಿದಂತೆ ಸರತಿ ಸಾಲಿನಲ್ಲಿ ಎಷ್ಟು ಭಕ್ತರು ಇದ್ದಾರೆ? ಈಗ ಸರತಿ ಸಾಲಿನಲ್ಲಿ ನಿಂತರೆ ದರ್ಶನಕ್ಕೆ ಎಷ್ಟು ಸಮಯ ಆಗಬಹುದು? ಎಂಬ ಮಾಹಿತಿಯನ್ನು ತಿಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದು ಡಿಸಿ ಲತಾಕುಮಾರಿ ತಿಳಿಸಿದ್ದಾರೆ.

‘‘ಕಡಿಮೆ ಅವಧಿಯಲ್ಲಿ ಲಕ್ಷಾಂತರ ಭಕ್ತಾದಿಗಳಿಗೆ ದೇವಿ ದರ್ಶನ ಮಾಡಿಸುವುದು ಸವಾಲಿನ ಕೆಲಸ. ಆದಾಗ್ಯೂ ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆಯನ್ನು ನಿಖರವಾಗಿ ಹೇಳಲು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗುವುದು. ಇದರಿಂದ ಭಕ್ತರಿಗೆ ಅನುಕೂಲವಾಗಲಿದೆ. ದಟ್ಟಣೆ ಇಲ್ಲದ ವೇಳೆ ಬಂದು ದರ್ಶನದ ಸರತಿ ಸಾಲಿನಲ್ಲಿ ನಿಲ್ಲಲು ಅವಕಾಶವಾಗುತ್ತದೆ ಎನ್ನುತ್ತಾರೆ ಡಿಸಿ.

ವೆಬ್‌ಸೈಟ್‌ ಲಾಂಚ್
ಜಾತ್ರಾ ಮಹೋತ್ಸವ ಪ್ರಯುಕ್ತ ವೆಬ್‌ಸೈಟ್‌ ತೆರೆಯಲಾಗುವುದು. ದೇವಾಲಯದ ಬಳಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಲೈವ್‌ ಟೆಲಿಕಾಸ್ಟ್‌ ಆಗಬೇಕು. ಇದಕ್ಕಾಗಿ ಪ್ರತ್ಯೇಕವಾಗಿ ಒಂದು ಸಮಿತಿ ರಚಿಸಬೇಕು. ಸೌಂಡ್‌ ಸಿಸ್ಟಮ್‌ನಲ್ಲಿಯಾವುದೇ ಅಡಚಣೆ ಉಂಟಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚಿಸಿದೆ.

ಶ್ರೀ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಕುರಿತು ಪೂರ್ವ ಸಿದ್ಧತಾ ಸಭೆ ನಡೆಸಿದ್ದು, ಪ್ರತಿ ವಾರಕ್ಕೊಮ್ಮೆ ಸಭೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಕಳೆದ ವರ್ಷ ಭಕ್ತರ ಸರತಿ ಸಾಲಿನಲ್ಲಿ ಬ್ಯಾರಿಕೇಡ್‌ ಫ್ಲೇಟ್‌ಗಳು ಕಾಲಿಗೆ ತಗುಲಿ ಹಲವರು ಗಾಯಗೊಂಡಿದ್ದರು. ಇದು ಈ ಬಾರಿ ಪುನರಾವರ್ತನೆ ಆಗದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ನಾನಾ ಸ್ಪರ್ಧೆ
ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾವಯವ ಉತ್ಪನ್ನಗಳ ಬಳಕೆಗೆ ಉತ್ತೇಜನ ನೀಡಲು ಸಾವಯವ ಮೇಳ, ಶ್ವಾನ ಪ್ರದರ್ಶನ, ಪಾಕ ಸ್ಪರ್ಧೆ ಏರ್ಪಡಿಸಲು ನಿರ್ಧರಿಸಲಾಗಿದೆ.

ಗಣ್ಯರಿಗೆ ಸಮಯ
ಹಿಂದಿನ ವರ್ಷದಂತೆ ಈ ಬಾರಿಯೂ ಗಣ್ಯರಿಗೆ ನಿಗದಿತ ಸಮಯದಲ್ಲಿ ಮಾತ್ರ ಅವಕಾಶದ ಜತೆಗೆ ಇಷ್ಟೇ ಜನ ಬರಬೇಕು ಹಾಗೂ ಜಿಲ್ಲಾಡಳಿತ ಕಲ್ಪಿಸುವ ವಾಹನದಲ್ಲೇ ಬರಬೇಕು ಎಂದು ಎಂಬ ಷರತ್ತು ವಿಧಿಸಲು ನಿರ್ಧರಿಸಿದೆ. ಒಟ್ಟಾರೆ ಈ ಬಾರಿ ಹಾಸನಾಂಬ ಉತ್ಸವಕ್ಕೆ ನಾಲ್ಕು ತಿಂಗಳಿಗೂ ಮುನ್ನವೇ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದ್ದು, ಭಕ್ತರಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸವಾಲು ಏನು?
ಹಾಸನಾಂಬ ದೇಗುಲದ ದೇವರ ಗುಡಿ ಬಾಗಿಲು ಕಿರಿದಾಗಿರುವುದೇ ದೊಡ್ಡ ಸವಾಲಾಗಿದೆ. ಒಂದು ಗಂಟೆಗೆ ಎಷ್ಟು ಭಕ್ತರು ದರ್ಶನ ಮಾಡಬಹುದು ಎಂಬ ಲೆಕ್ಕಾಚಾರ ಆಧಾರವಾಗಿಟ್ಟುಕೊಂಡು, ಪ್ರವೇಶ ದ್ವಾರವನ್ನು ಈ ಬಾರಿ ಅತ್ಯಂತ ಆಕರ್ಷಕವಾಗಿ ರೂಪಿಸುವ ಜತೆಗೆ ಪರ್ಯಾಯ ವ್ಯವಸ್ಥೆ ಬಗ್ಗೆಯೂ ಜಿಲ್ಲಾಡಳಿತ ಚಿಂತಿಸಿದೆ.

“ಹಾಸನಾಂಬ ಉತ್ಸವಕ್ಕೆ ಈ ಬಾರಿ ನಾಲ್ಕು ತಿಂಗಳ ಮುನ್ನವೇ ಪೂರ್ವಭಾವಿ ಸಭೆ ನಡೆಸಲಾಗಿದೆ. ಹಿಂದಿನ ವರ್ಷದ ಲೋಪ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅವರಿಗೆ ಮುಂಚಿತವಾಗಿ ಆನ್‌ಲೈನ್‌, ವೆಬ್‌ಸೈಟ್‌ ಮೂಲಕ ಮಾಹಿತಿ ನೀಡಲಾಗುವುದು ಎಂದು ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ತಿಳಿಸಿದರು.

Leave a Reply

Your email address will not be published. Required fields are marked *