BBMP
Loading ...

Metro

Greater Bengaluru News9 : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಭಾರಿ ಶಾಕ್ ನೀಡಿದ್ದು, ಇನ್ಮುಂದೆ ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ನಿಯಮ ಮೀರಿ ಹುಚ್ಚಾಟ ಪ್ರದರ್ಶಿಸಿದರೆ ಭಾರಿ ಮೊತ್ತದ ದಂಡ ತೆರಬೇಕಾಗುತ್ತದೆ.

ಮೆಟ್ರೋ ಪ್ರಯಾಣಿಕರ ಸುರಕ್ಷತೆ ಮತ್ತು ನೆಮ್ಮದಿಯ ಪ್ರಯಾಣಕ್ಕೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಮ್ಮ ಮೆಟ್ರೋ ಮುಂದಾಗಿದ್ದು, ಈ ಕುರಿತು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ರೈಲಿನಲ್ಲಿ ರೀಲ್ಸ್ ಮಾಡುವುದು, ನೆಲದ ಮೇಲೆ ಕುಳಿತುಕೊಳ್ಳುವುದು ಹಾಗೂ ಸಹ ಪ್ರಯಾಣಿಕರಿಗೆ ತೊಂದರೆ ಕೊಡುವವರ ಜೇಬಿಗೆ ಇನ್ಮುಂದೆ ದೊಡ್ಡ ಕತ್ತರಿ ಬೀಳಲಿದೆ.

ಹೊಸ ನಿಯಮಗಳ ಪ್ರಕಾರ, ಮೆಟ್ರೋ ಆವರಣದಲ್ಲಿ ನಿಯಮ ಉಲ್ಲಂಘಿಸುವವರಿಗೆ ಆರಂಭದಲ್ಲಿ ಎಚ್ಚರಿಕೆಯ ರೂಪದಲ್ಲಿ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿಗೆ ತಪ್ಪು ಮಾಡಿದರೆ 500 ರೂ. ದಂಡ ಪಾವತಿಸಬೇಕಾಗುತ್ತದೆ. ಆದರೆ, ಇದೇ ತಪ್ಪನ್ನು ಪದೇ ಪದೇ ಪುನರಾವರ್ತಿಸಿದರೆ ದಂಡದ ಮೊತ್ತವು ಬರೋಬ್ಬರಿ 5,000 ದಿಂದ 25,000 ರೂ. ವರೆಗೆ ಏರಿಕೆಯಾಗಲಿದೆ. ಸಹ ಪ್ರಯಾಣಿಕರ ನೆಮ್ಮದಿಗೆ ಕೆಡಿಸುವ ಇಂತಹ ಕಿಡಿಗೇಡಿ ಕೃತ್ಯಗಳಿಗೆ ಬ್ರೇಕ್ ಹಾಕಲು ಬಿಎಂಆರ್‌ಸಿಎಲ್ ಈ ಕಠಿಣ ನಿರ್ಧಾರಕ್ಕೆ ಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಯಶವಂತ್ ಚೌಹಾಣ್ ಅವರು, “ಮೆಟ್ರೋದಲ್ಲಿ ಕುಳಿತು ತಿಂಡಿ ತಿನ್ನುವುದು ಅಥವಾ ಊಟ ಮಾಡುವುದಕ್ಕೆ ಈ ಹಿಂದೆ ಇದ್ದ 500 ರೂ. ದಂಡವನ್ನು ಇದೀಗ 2,500 ರೂ. ಕ್ಕೆ ಹೆಚ್ಚಿಸಲಾಗಿದೆ. ಇನ್ನು ರೈಲಿನೊಳಗೆ ಜೋರಾಗಿ ಹಾಡುಗಳನ್ನು ಹಾಕುವುದು, ಇತರರಿಗೆ ಕಿರಿಕಿರಿ ಉಂಟುಮಾಡುವ ಸೌಂಡ್ ಮಾಡುವುದು ಅಥವಾ ಹುಚ್ಚಾಟ ನಡೆಸಿದರೆ ಕನಿಷ್ಠ 5,000 ದಿಂದ ಗರಿಷ್ಠ 25,000 ರೂ. ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *