BBMP
Loading ...

Bidadi Township Project

Greater Bengaluru News9 : ಬಿಡದಿ ಟೌನ್‌ಶಿಪ್ ಯೋಜನೆಯನ್ನು ಸರ್ಕಾರ ಹಿಂಪಡೆಯದಿದ್ದರೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಸತ್ಯಾಗ್ರಹ ನಡೆಸುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಜೆಡಿಎಸ್ ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಡದಿ ಪ್ರದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು. ಗ್ರಾಮದಲ್ಲಿರುವ ಬಹುತೇಕ ಜನರು ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ್ದು, ಕೆಲವೇ ರೈತರು ತಮ್ಮ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಭೂಮಿ ನೀಡಲು ಮುಂದಾಗಿರುವವರ ಬಳಿ ಕೇವಲ 17 ಎಕರೆ ಮಾತ್ರ ಜಮೀನು ಇದ್ದು, ಉಳಿದ ಭೂಮಿಯಲ್ಲಿ ವಾಸಿಸುವ ರೈತರು ಹಾಗೂ ಹೈನುಗಾರಿಕೆಯನ್ನು ಅವಲಂಬಿಸಿರುವ ಕುಟುಂಬಗಳ ಬದುಕಿನ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಹೇಳಿದರು.

ಪೊಲೀಸರ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ದೇವೇಗೌಡ, ಕಂದಾಯ ಇಲಾಖೆಯ ದೂರಿನ ಆಧಾರದ ಮೇಲೆ ರೈತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಿದರು. “ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡುವ ಪೊಲೀಸರ ವಿರುದ್ಧ ನನಗೆ ಯಾವುದೇ ಆಕ್ಷೇಪ ಇಲ್ಲ. ಆದರೆ ರೈತರ ನೋವು ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದರೆ ಹೈನುಗಾರಿಕೆ ನಡೆಸುವುದು ಯಾರು?” ಎಂದು ಪ್ರಶ್ನಿಸಿದರು.

ಪ್ರತಿದಿನ ಸುಮಾರು 60 ಸಾವಿರ ಲೀಟರ್ ಹಾಲು ಉತ್ಪಾದಿಸುವ ರೈತ ಕುಟುಂಬಗಳ ಬದುಕಿಗೆ ಧಕ್ಕೆಯಾಗಬಾರದು ಎಂದು ಒತ್ತಾಯಿಸಿದ ಅವರು, ತಾವು ಮುಖ್ಯಮಂತ್ರಿ ಹಾಗೂ ಶಾಸಕರಾಗಿದ್ದ ಅವಧಿಯಲ್ಲಿ ಆ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾಗಿ ಹೇಳಿದರು.

ಜೂನ್ 25ರಂದು ಮುಖ್ಯಮಂತ್ರಿ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ದೇವೇಗೌಡ, “ಒಬ್ಬ ರೈತನ ಮಗನಾಗಿ ಪತ್ರ ಬರೆದಿದ್ದೇನೆ. ಅದು ತಲುಪಿದೆ ಎಂಬ ಕನಿಷ್ಠ ಹಿಂಬರಹವನ್ನೂ ಸರ್ಕಾರ ನೀಡಿಲ್ಲ” ಎಂದು ಕಿಡಿಕಾರಿದರು.

ರೈತರ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ತಕ್ಷಣ ಹಿಂಪಡೆಯಬೇಕು ಹಾಗೂ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಆಗ್ರಹಿಸಿದರು.

“ಸರ್ಕಾರ ಈ ಬೇಡಿಕೆಗಳನ್ನು ಪರಿಗಣಿಸದಿದ್ದರೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಸತ್ಯಾಗ್ರಹ ನಡೆಸುತ್ತೇನೆ. ಆ ಪರಿಸ್ಥಿತಿಗೆ ನನ್ನನ್ನು ದೂಡಬೇಡಿ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದೇ ವೇಳೆ, ಸದ್ಯಕ್ಕೆ ಭೂ ಸಮೀಕ್ಷೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ದೇವೇಗೌಡ, ಮುಂದಿನ ದಿನಗಳಲ್ಲಿ ಸರ್ಕಾರದ ನಿಲುವನ್ನು ಆಧರಿಸಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *