BBMP
Loading ...

Adichunchana

Greater Bengaluru News9 : ನಗರದ ಆದಿಚುಂಚನಗಿರಿ ಮಠಕ್ಕೆ ಸೇರಿದ ಸುಮಾರು 120 ಕೋಟಿ ರೂಪಾಯಿ ಮೌಲ್ಯದ ಜಮೀನನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಿದ ಬೃಹತ್ ವಂಚನೆ ಜಾಲವನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ 6 ಮಂದಿ ಸರ್ಕಾರಿ ಅಧಿಕಾರಿಗಳು, ಓರ್ವ ರೌಡಿ ಶೀಟರ್ ಸೇರಿದಂತೆ ಒಟ್ಟು 11 ಮಂದಿಯನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಪೊಲೀಸರ ಮಾಹಿತಿ ಪ್ರಕಾರ, ಸುಮಾರು 30 ವರ್ಷಗಳ ಹಿಂದೆ ಭಕ್ತರು ಕೆಂಗೇರಿ ಹೋಬಳಿಯ ಕಂಬಳಿಪುರ ಗ್ರಾಮದ ಸರ್ವೇ ನಂ. 43ರಲ್ಲಿ ಇರುವ 45 ಎಕರೆ ಜಮೀನನ್ನು ಆದಿಚುಂಚನಗಿರಿ ಮಠಕ್ಕೆ ದಾನವಾಗಿ ನೀಡಿದ್ದರು. ಈ ಪೈಕಿ ಸುಮಾರು 6 ಎಕರೆ ಬೆಲೆಬಾಳುವ ಜಮೀನನ್ನು ಅಕ್ರಮವಾಗಿ ಕಬಳಿಸಲು ನೆಲಮಂಗಲ ಮೂಲದ ನರೇಶ್ ಗೌಡ ಹಾಗೂ ಬ್ರೋಕರ್ ಆರೋಗ್ಯಸ್ವಾಮಿ ಸಂಚು ರೂಪಿಸಿದ್ದರು.

ವಂಚನೆಗೆ ಮುಂದಾದ ಆರೋಪಿಗಳು ಮಠದ ಜಮೀನಿನ ಮೂಲ ಮಾಲೀಕರ ಹೆಸರಿನಲ್ಲೇ ದಾಖಲೆ ಸೃಷ್ಟಿಸಲು ಸ್ಮಶಾನಗಳಲ್ಲಿ ಹುಡುಕಾಟ ನಡೆಸಿದ್ದರು. ಕೊನೆಗೆ ಮೂಲ ಮಾಲೀಕರ ಹೆಸರೇ ಹೊಂದಿದ್ದ ವ್ಯಕ್ತಿಯ ಸಮಾಧಿಯನ್ನು ಪತ್ತೆಹಚ್ಚಿ, ಅವರ ಕುಟುಂಬದ ಮಾಹಿತಿ ಸಂಗ್ರಹಿಸಿದ್ದರು.

ಈ ವೇಳೆ ಬೇಗೂರು ಪೊಲೀಸ್ ಠಾಣೆಯ ರೌಡಿ ಶೀಟರ್ ಫ್ರಾನ್ಸಿಸ್ ಆರೋಪಿಗಳ ಸಂಪರ್ಕಕ್ಕೆ ಬಂದಿದ್ದಾನೆ. ಫ್ರಾನ್ಸಿಸ್ ತಂದೆಯ ಹೆಸರು, ವಯಸ್ಸು ಸೇರಿದಂತೆ ಕೆಲವು ವಿವರಗಳು ಮೂಲ ಮಾಲೀಕರ ಮಾಹಿತಿಗೆ ಹೊಂದಿಕೆಯಾಗಿದ್ದರಿಂದ, ಫ್ರಾನ್ಸಿಸ್ ಮತ್ತು ಜೋಸ್ವಾನ್ ಅವರನ್ನು ಅಣ್ಣ-ತಂಗಿ ಎಂದು ತೋರಿಸಿ ನಕಲಿ ವಂಶವೃಕ್ಷ ಸೃಷ್ಟಿಸಲಾಗಿತ್ತು.

ಈ ನಕಲಿ ದಾಖಲೆಗಳನ್ನು ಸಿದ್ಧಪಡಿಸಲು ಕೆಲವು ಕಂದಾಯ ಅಧಿಕಾರಿಗಳು ಸಹಕಾರ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೇಗೂರು ಗ್ರಾಮದ ವಿಲೇಜ್ ಅಕೌಂಟೆಂಟ್ ಶಿವಪ್ರಸಾದ್, ಕಂದಾಯ ನಿರೀಕ್ಷಕ ಕಿರಣ್ ಹಾಗೂ ಡೆಪ್ಯುಟಿ ತಹಶೀಲ್ದಾರ್ ದೀಪಕ್ ಹಣ ಪಡೆದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರೆಂದು ಆರೋಪಿಸಲಾಗಿದೆ.

ಅಲ್ಲದೆ, ಕೆಂಗೇರಿ ವಿಲೇಜ್ ಅಕೌಂಟೆಂಟ್ ಸತೀಶ್ ಕುಮಾರ್, ಕಂದಾಯ ನಿರೀಕ್ಷಕ ಅರುಣ್ ಕುಮಾರ್ ಹಾಗೂ ಡೆಪ್ಯುಟಿ ತಹಶೀಲ್ದಾರ್ ನಕಲಿ ದಾಖಲೆಗಳಾಗಿದ್ದರೂ ಖಾತೆ ಬದಲಾವಣೆ ಮಾಡಿ ಜಮೀನನ್ನು ಆರೋಪಿಗಳ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಬಳಿಕ ಆರೋಪಿಗಳು ಆ ಜಮೀನನ್ನು ಇತರರಿಗೆ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ್ದಾರೆ ಎನ್ನಲಾಗಿದೆ.

ಜಮೀನು ಅಕ್ರಮವಾಗಿ ವರ್ಗಾವಣೆಯಾಗಿರುವ ಮಾಹಿತಿ ತಿಳಿದ ಬಳಿಕ ಆದಿಚುಂಚನಗಿರಿ ಮಠದ ಆಡಳಿತ ಮಂಡಳಿ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ವಂಚನೆಯ ಸಂಪೂರ್ಣ ಜಾಲವನ್ನು ಬಯಲಿಗೆಳೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 6 ಸರ್ಕಾರಿ ಅಧಿಕಾರಿಗಳು ಸೇರಿದಂತೆ ಒಟ್ಟು 11 ಮಂದಿಯನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ನರೇಶ್ ಗೌಡನ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *