BBMP
Loading ...

Pythons 123

Greater Bengaluru News9 : ಬೆಂಗಳೂರಿನ ಜನವಸತಿ ಪ್ರದೇಶದ ಅಪಾರ್ಟ್‌ಮೆಂಟ್ ಒಂದರಲ್ಲಿ ಬರೋಬ್ಬರಿ 10 ಅಡಿಗೂ ಮೀರಿದ ಹೆಬ್ಬಾವನ್ನು ಅಕ್ರಮವಾಗಿ ಸಾಕುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ನ ಫ್ಲಾಟ್ ನಂಬರ್ 1201ರಲ್ಲಿ ಈ ಆತಂಕಕಾರಿ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

ಆಂಧ್ರ ಮೂಲದ ಅತ್ತಾಹ್ ಉಲ್ಲಾ ಖಾನ್ ಎಂಬ ವ್ಯಕ್ತಿ ಈ ಫ್ಲಾಟ್‌ನಲ್ಲಿ ವಾಸವಾಗಿದ್ದ. ಕಳೆದ ಕೆಲವು ದಿನಗಳಿಂದ ಈತನ ಫ್ಲ್ಯಾಟ್‌ನಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದನ್ನು ಅಪಾರ್ಟ್‌ಮೆಂಟ್ ನಿವಾಸಿಗಳು ಗಮನಿಸಿದ್ದರು. ಈತ ಹಾವುಗಳ ಸಾಗಾಟ ಮಾಡುತ್ತಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಸದಸ್ಯರು, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಿನ್ನೆ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕಾಮಾಕ್ಷಿಪಾಳ್ಯ ಪೊಲೀಸರು ಜಂಟಿಯಾಗಿ ಫ್ಲಾಟ್ ಮೇಲೆ ದಾಳಿ ನಡೆಸಿದರು. ಮನೆಯನ್ನು ತಪಾಸಣೆ ನಡೆಸಿದಾಗ ಅಲ್ಲಿನ ಒಂದು ಕಾಟನ್ ಬಾಕ್ಸ್‌ನಲ್ಲಿ ಹೆಬ್ಬಾವನ್ನು ಇರಿಸಿರುವುದು ಕಂಡುಬಂದಿದೆ. ಯಾವುದೇ ಅನುಮತಿ ಇಲ್ಲದೆ ಅಪಾಯಕಾರಿ ಹಾವನ್ನು ಅಪಾರ್ಟ್‌ಮೆಂಟ್‌ನಲ್ಲಿ ಸಾಕುತ್ತಿರುವುದನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.

ಅಧಿಕಾರಿಗಳು ಹಾವನ್ನು ವಶಕ್ಕೆ ಪಡೆಯಲು ಮುಂದಾದಾಗ ಅತ್ತಾಹ್ ಉಲ್ಲಾ ಖಾನ್ ಭಾರಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಪೊಲೀಸರನ್ನು ಮತ್ತು ಅರಣ್ಯ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆತ, ಅವರ ಕಾರ್ಯಕ್ಕೆ ಅಡ್ಡಿಪಡಿಸಿದ ಎನ್ನಲಾಗಿದೆ. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಈತ ಕೇವಲ ಹವ್ಯಾಸಕ್ಕಾಗಿ ಹಾವು ಸಾಕುತ್ತಿದ್ದನೋ ಅಥವಾ ಇದರ ಹಿಂದೆ ಹಾವುಗಳ ಸಾಗಾಟದಂತಹ ಅಕ್ರಮ ಜಾಲವಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಸದ್ಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ NCR ದಾಖಲಾಗಿದ್ದು, ಅಪಾರ್ಟ್‌ಮೆಂಟ್ ಅಸೋಸಿಯೇಷನ್ ನೀಡಿರುವ ದೂರಿನ ಮೇರೆಗೆ ತನಿಖೆ ಮುಂದುವರಿದಿದೆ. ಅರಣ್ಯ ಇಲಾಖೆಯು ಹಾವನ್ನು ರಕ್ಷಿಸಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣದ ತನಿಖೆ ನಡೆಸುತ್ತಿದೆ. ಅಪಾರ್ಟ್‌ಮೆಂಟ್‌ನಂತಹ ಜನದಟ್ಟಣೆಯ ಪ್ರದೇಶದಲ್ಲಿ ಇಂತಹ ಅಪಾಯಕಾರಿ ಹಾವುಗಳನ್ನು ಸಾಕುತ್ತಿರುವುದು ಇತರ ನಿವಾಸಿಗಳ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ.

Leave a Reply

Your email address will not be published. Required fields are marked *