Greater Bengaluru News9 : ಸರ್ಕಾರಿ ನೌಕರರು ಸರ್ಕಾರಿ ಸೇವಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುವ ಸಂದರ್ಭದಲ್ಲಿ, GBA (ಗ್ರೇಟರ್ ಬೆಂಗಳೂರು ಆಡಳಿತ) ಟ್ಯಾಕ್ಸ್ ಕಲೆಕ್ಟರ್ ಶಶಿಕಾಂತ್ ಬೆಳ್ಳೂರ ವಿರುದ್ಧ ಅಕ್ರಮ ವಾಟರ್ ಬ್ಯುಸಿನೆಸ್ ನಡೆಸಿರುವ ಗಂಭೀರ ಆರೋಪಗಳು ಕೇಳಿಬಂದಿವೆ. ವಸತಿ ಉದ್ದೇಶಕ್ಕಾಗಿ ಕೊರೆಸಿದ ಬೋರ್ವೆಲ್ನಿಂದ ವಾಣಿಜ್ಯ ಉದ್ದೇಶಕ್ಕೆ ನೀರು ಸರಬರಾಜು ಮಾಡಿ, ಸರ್ಕಾರಿ ಇಲಾಖೆಗಳಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.
ಲಭ್ಯ ಮಾಹಿತಿಯ ಪ್ರಕಾರ, ಪೀಣ್ಯ ಕೈಗಾರಿಕಾ ಪ್ರದೇಶದ ನಾಗಸಂದ್ರ ಉಪವಿಭಾಗ ಹಾಗೂ ವಾರ್ಡ್ ಸಂಖ್ಯೆ 41ರಲ್ಲಿ GBA ಟ್ಯಾಕ್ಸ್ ಕಲೆಕ್ಟರ್ ಆಗಿರುವ ಶಶಿಕಾಂತ್ ಬೆಳ್ಳೂರ, ಸರ್ಕಾರಿ ಕರ್ತವ್ಯದ ಜೊತೆಗೆ ಖಾಸಗಿ ವಾಟರ್ ಟ್ಯಾಂಕರ್ ವ್ಯವಹಾರದಲ್ಲೂ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ‘ಅದ್ವಿಕ್ ವಾಟರ್ ಸಪ್ಲೈ’ ಹೆಸರಿನಲ್ಲಿ ನೀರು ಸರಬರಾಜು ನಡೆಸುತ್ತಿದ್ದು, ಟ್ಯಾಂಕರ್ ಮತ್ತು ಟ್ರ್ಯಾಕ್ಟರ್ ಮೂಲಕ ಮನೆಗಳು, ಅಪಾರ್ಟ್ಮೆಂಟ್ಗಳು, ಹೋಟೆಲ್ಗಳು ಹಾಗೂ ನಿರ್ಮಾಣ ಹಂತದ ಕಟ್ಟಡಗಳಿಗೆ ನೀರು ಪೂರೈಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಆರೋಪಗಳ ಪ್ರಕಾರ, ವಸತಿ ಉದ್ದೇಶಕ್ಕಾಗಿ ಅನುಮತಿ ಪಡೆದ ಬೋರ್ವೆಲ್ನಿಂದ ವಾಣಿಜ್ಯ ಬಳಕೆ ಮಾಡಲಾಗುತ್ತಿದೆ. ದಿನನಿತ್ಯ ಟ್ಯಾಂಕರ್ ಮೂಲಕ ನೀರು ಮಾರಾಟ ಮಾಡಲಾಗುತ್ತಿದೆ. ಟ್ಯಾಂಕರ್ಗೆ ₹800, ಟ್ರ್ಯಾಕ್ಟರ್ಗೆ ₹500 ನಿಗದಿ ದರ ಇದೆ. ಚಾಲಕರ ಮೂಲಕ ಹಾಗೂ ಸ್ವತಃ ವಾಹನ ಚಾಲನೆ ಮಾಡಿ ನೀರು ಸರಬರಾಜು ಮಾಡಲಾಗುತ್ತಿದೆ. ಇದು ನೀರಿನ ಬಳಕೆ ಸಂಬಂಧಿತ ನಿಯಮಗಳ ಉಲ್ಲಂಘನೆಯಾಗಬಹುದು ಎಂಬ ಪ್ರಶ್ನೆಗಳು ಮೂಡಿವೆ.
BWSSB ಹಾಗೂ BESCOMಗೆ ಲಕ್ಷಾಂತರ ರೂ. ವಂಚನೆ?
ಈ ಪ್ರಕರಣದಲ್ಲಿ ಮತ್ತೊಂದು ಗಂಭೀರ ಆರೋಪವೆಂದರೆ, ವಾಣಿಜ್ಯ ಉದ್ದೇಶಕ್ಕೆ ಪ್ರತ್ಯೇಕ ವಿದ್ಯುತ್ ಸಂಪರ್ಕ ಪಡೆಯದೆ ವಸತಿ ವಿದ್ಯುತ್ ಸಂಪರ್ಕದ ಬಳಕೆಯಾಗುತ್ತಿದೆ. ವಾಣಿಜ್ಯ ನೀರು ಸರಬರಾಜಿಗೆ ಅಗತ್ಯ ಅನುಮತಿ ಇಲ್ಲದೇ ಕಾರ್ಯಾಚರಣೆ ನಡೆಸಲಾಗುತ್ತಿದೆ. BWSSB ಹಾಗೂ BESCOMಗೆ ಆದಾಯ ನಷ್ಟ ಉಂಟುಮಾಡಿರುವ ಆರೋಪಗಳೂ ಕೇಳಿ ಬಂದಿವೆ. ಈ ಆರೋಪಗಳು ಸಾಬೀತಾದರೆ ಸಂಬಂಧಿತ ಕಾನೂನುಗಳಡಿ ದಂಡ ಹಾಗೂ ಕ್ರಮಕ್ಕೆ ಅವಕಾಶವಿದೆ.
ಸರ್ಕಾರಿ ನೌಕರರು ಯಾವುದೇ ಖಾಸಗಿ ವ್ಯಾಪಾರ ಅಥವಾ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದಕ್ಕೆ ಸೇವಾ ನಿಯಮಗಳಲ್ಲಿ ಹಲವು ನಿರ್ಬಂಧಗಳಿವೆ. ಶಶಿಕಾಂತ್ ಬೆಳ್ಳೂರ ವಿರುದ್ಧ, CCA (Classification, Control and Appeal) Rules ಉಲ್ಲಂಘನೆ, ಸರ್ಕಾರಿ ಸೇವಾ ನಿಯಮ ಉಲ್ಲಂಘನೆ, ಹುದ್ದೆಯ ದುರುಪಯೋಗ ಮಾಡಿಕೊಂಡಿರುವ ಆರೋಪಗಳು ಇದೀಗ ಗಮನ ಸೆಳೆಯುತ್ತಿವೆ. ಆಡಿಯೋ, ವಿಡಿಯೋ ಹಾಗೂ ಹಣ ವರ್ಗಾವಣೆ ದಾಖಲೆಗಳು ಲಭ್ಯ ಎನ್ನುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಡಿಯೋ ಸಂಭಾಷಣೆ, ವಿಡಿಯೋ ದೃಶ್ಯಗಳು, PhonePe ಮತ್ತು Google Pay ಮೂಲಕ ಹಣ ಸ್ವೀಕರಿಸಿರುವ ಸ್ಕ್ರೀನ್ಶಾಟ್ಗಳು, ನೀರಿನ ಟ್ಯಾಂಕರ್ ಜಾಹೀರಾತು ಲಭ್ಯವಿರುವುದಾಗಿ ವರದಿಯಾಗಿದೆ.
‘ಮಂತ್ರಿ ಕಚೇರಿಯಿಂದ ಕರೆ ಮಾಡಿಸಿ’ ಎನ್ನುವ ಸಂಭಾಷಣೆ ವೈರಲ್?
“ನಿಮ್ಮ ಕೆಲಸ ಆಗಬೇಕಾದರೆ ಸಚಿವರ ಕಚೇರಿಯಿಂದ ಕರೆ ಮಾಡಿಸಿ”
“ಅಥವಾ ಡಿ.ಕೆ. ಸುರೇಶ್ ಕಡೆಯಿಂದ ಫೋನ್ ಮಾಡಿಸಿ”
“IAS ಅಧಿಕಾರಿಗಳಿಗೆ ತಾಳ್ಮೆ ಇರುವುದಿಲ್ಲ”
“ಪಶ್ಚಿಮ ವಲಯದ ಆಯುಕ್ತರ ಜೊತೆ ಮಾತನಾಡಿಸಿ”
ಎನ್ನುವ ರೀತಿಯ ದೂರವಾಣಿ ಸಂಭಾಷಣೆಯ ವಿಡಿಯೋ ಲಭ್ಯವಿದೆ ಎನ್ನಲಾಗುತ್ತಿದೆ.
ಆರೋಪಗಳ ತನಿಖೆ ನಡೆಯಬೇಕೆಂಬ ಆಗ್ರಹ
ಸರ್ಕಾರಿ ಹುದ್ದೆಯಲ್ಲಿರುವ ವ್ಯಕ್ತಿಯ ವಿರುದ್ಧ ಇಂತಹ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಸರ್ಕಾರ ತನಿಖೆಗೆ ಆದೇಶ ನೀಡುತ್ತದೆಯೇ? BWSSB ಮತ್ತು BESCOM ಕ್ರಮ ಕೈಗೊಳ್ಳುತ್ತವೆಯೆ? ಸೇವಾ ನಿಯಮ ಉಲ್ಲಂಘನೆ ಬಗ್ಗೆ ಶಿಸ್ತು ಕ್ರಮ ಜರುಗುತ್ತದೆಯೆ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ.


