BBMP
Loading ...

IMG-20260629-WA0089

Greater Bengaluru News9 : ರಾಜ್ಯದ ವಿದ್ಯುತ್ ನಿಗಮಗಳ ಖಾಸಗೀಕರಣ ಕುರಿತು ಅಂತಿಮ ತೀರ್ಮಾನವನ್ನು ಸಚಿವ ಸಂಪುಟದಲ್ಲಿಯೇ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ನೌಕರರ ಅಭಿಪ್ರಾಯಕ್ಕೂ ಸರ್ಕಾರ ಗೌರವ ನೀಡಲಿದ್ದು, ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಅಸೋಸಿಯೇಷನ್‌ಗಳ ಒಕ್ಕೂಟ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡಬಾರದು ಎಂಬ ಬೇಡಿಕೆಯನ್ನು ಸಚಿವ ಸಂಪುಟದ ಮುಂದೆ ಚರ್ಚೆಗೆ ತಂದು ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಖಾಸಗೀಕರಣದ ಪ್ರಸ್ತಾಪ ಹೊಸದಲ್ಲ. 2003ರಲ್ಲಿ ಬಿಜೆಪಿ ಸರ್ಕಾರವೇ ಈ ಸಂಬಂಧ ಕಾನೂನು ತಂದಿತ್ತು. ಆಗ ನೌಕರರ ಸಂಘಟನೆಗಳು ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ಈಗ ಮಾತ್ರ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ಟೀಕಿಸಿದರು.

“ನೂರಾರು ವರ್ಷಗಳಿಂದ ವಿದ್ಯುತ್ ಜಾಲ ನಿರ್ಮಿಸಿದ್ದು ಸರ್ಕಾರಿ ಸಿಬ್ಬಂದಿ. ಸರ್ಕಾರದ ಬಂಡವಾಳದಲ್ಲಿ ನಿರ್ಮಿಸಿದ ವ್ಯವಸ್ಥೆಯಿಂದ ಈಗ ಖಾಸಗಿ ಕಂಪನಿಗಳು ಲಾಭ ಗಳಿಸಬೇಕು ಎನ್ನುವುದು ಎಷ್ಟು ಸಮಂಜಸ?” ಎಂದು ಪ್ರಶ್ನಿಸಿದ ಅವರು, “ನೀವು ನಮ್ಮನ್ನು ಕಾಳಜಿ ಮಾಡಿದರೆ ನಾವು ನಿಮ್ಮನ್ನು ಕಾಳಜಿ ಮಾಡುತ್ತೇವೆ. ನಿಮ್ಮ ಅಭಿಪ್ರಾಯವೇ ನನ್ನ ಅಭಿಪ್ರಾಯ” ಎಂದು ನೌಕರರಿಗೆ ಭರವಸೆ ನೀಡಿದರು.

ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ ಅವರು, ನೌಕರರು ಸರ್ಕಾರದ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ, ಇಂಧನ ಸಚಿವ ಕೆ.ಜೆ. ಜಾರ್ಜ್ ಖಾಸಗೀಕರಣದ ವಿರುದ್ಧ ತಮ್ಮ ನಿಲುವು ವ್ಯಕ್ತಪಡಿಸಿರುವುದನ್ನೂ ಉಲ್ಲೇಖಿಸಿದ ಡಿಕೆ ಶಿವಕುಮಾರ್, ಇಂಧನ ಇಲಾಖೆಯಲ್ಲಿ ಕಾಂಗ್ರೆಸ್ ಸರ್ಕಾರ ಹಲವು ಐತಿಹಾಸಿಕ ಬದಲಾವಣೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ವೇತನ ಪರಿಷ್ಕರಣೆ ಅವಧಿಯನ್ನು ಏಳು ವರ್ಷಗಳಿಂದ ಐದು ವರ್ಷಕ್ಕೆ ಇಳಿಸಿದ್ದು, ಯಾವುದೇ ಲಂಚವಿಲ್ಲದೆ 25 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಇಂಧನ ಸೋರಿಕೆಯನ್ನು 19ರಿಂದ 10 ಶೇಕಡಕ್ಕೆ ಇಳಿಸಿರುವುದು ಸೇರಿದಂತೆ ಹಲವು ಸಾಧನೆಗಳನ್ನು ಅವರು ಪ್ರಸ್ತಾಪಿಸಿದರು.

ದೇಶದಲ್ಲೇ ಮಾದರಿಯಾಗಿದ್ದ ಪಾವಗಡ ಸೋಲಾರ್ ಪಾರ್ಕ್ ಸೇರಿದಂತೆ ಹಲವು ಯೋಜನೆಗಳನ್ನು ತಮ್ಮ ಅವಧಿಯಲ್ಲಿ ಜಾರಿಗೊಳಿಸಲಾಗಿತ್ತು. ಬಳಿಕ ಕೇಂದ್ರ ಸರ್ಕಾರವೂ ಇದೇ ಮಾದರಿಯಲ್ಲಿ ಕುಸುಮ್ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.

ಇಂಧನ ಇಲಾಖೆಯ ಸಿಬ್ಬಂದಿ ಹಗಲು-ರಾತ್ರಿ ಶ್ರಮಿಸಿ ರಾಜ್ಯದ ಜನರಿಗೆ ಬೆಳಕು ನೀಡುತ್ತಿರುವ ಕಾಯಕಯೋಗಿಗಳು ಎಂದು ಶ್ಲಾಘಿಸಿದ ಡಿಕೆ ಶಿವಕುಮಾರ್, ಸರ್ಕಾರ ಹಾಗೂ ನೌಕರರ ನಡುವಿನ ವಿಶ್ವಾಸ ಮುಂದುವರಿಯಬೇಕು ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *