BBMP
Loading ...

Vidyut

Greater Bengaluru News9 : ರಾಜ್ಯ ಸರ್ಕಾರದ ಉದಾಸೀನ ಧೋರಣೆ ಮತ್ತು ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ ಜನವಿರೋಧಿ ನೀತಿಗಳ ವಿರುದ್ಧ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ (ರಿ) ನೇತೃತ್ವದಲ್ಲಿ, ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ‘ವಿದ್ಯುತ್ ಗುತ್ತಿಗೆದಾರರ ಉಳಿವಿಗಾಗಿ ಹೋರಾಟ’ ಎಂಬ ಬೃಹತ್ ಪ್ರತಿಭಟನಾ ಪ್ರದರ್ಶನವು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಯಶಸ್ವಿಯಾಗಿ ಜರುಗಿತು. ಸರ್ಕಾರದ ಖಾಸಗೀಕರಣ ನೀತಿಯಿಂದಾಗಿ ಉದ್ಯೋಗ ಮತ್ತು ಅಸ್ತಿತ್ವದ ಭೀತಿ ಎದುರಿಸುತ್ತಿರುವ ಸಾವಿರಾರು ಗುತ್ತಿಗೆದಾರರು ಒಗ್ಗೂಡಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ದಶಕಗಳಿಂದ ಇಲಾಖೆಯ ನಂಬಿಕಸ್ಥ ಕಣ್ಣುಗಳಂತೆ ಕೆಲಸ ಮಾಡುತ್ತಾ ಬಂದಿರುವ ಸ್ಥಳೀಯ ವಿದ್ಯುತ್ ಗುತ್ತಿಗೆದಾರರನ್ನು ಕಡೆಗಣಿಸಿ, ಇಡೀ ಇಲಾಖೆಯನ್ನೇ ಕಾರ್ಪೊರೇಟ್ ಸಂಸ್ಥೆಗಳ ಕೈಗೆ ಒಪ್ಪಿಸಲು ಸರ್ಕಾರ ವ್ಯವಸ್ಥಿತ ಸಂಚು ರೂಪಿಸುತ್ತಿದೆ ಎಂದು ಪ್ರತಿಭಟನಾಕಾರರು ಗಂಭೀರವಾಗಿ ಆರೋಪಿಸಿದರು. ಸರ್ಕಾರದ ಈ ಹಠಮಾರಿ ಧೋರಣೆಯಿಂದಾಗಿ ಸಾವಿರಾರು ಕುಟುಂಬಗಳ ಜೀವನಾಧಾರವಾಗಿರುವ ಗುತ್ತಿಗೆ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯುವ ಭೀತಿ ಎದುರಾಗಿದ್ದು, ವೃತ್ತಿಪರರು ಮತ್ತು ಸಾರ್ವಜನಿಕ ವಲಯದಲ್ಲಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಯಿತು.

ಬಂಡವಾಳಶಾಹಿಗಳ ಹಿತರಕ್ಷಣೆಗಾಗಿ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರದ ಈ ನಡೆಯಲ್ಲಿ ಯಾವುದೇ ಪಾರದರ್ಶಕತೆ ಕಾಣಿಸುತ್ತಿಲ್ಲ ಎಂದು ಗುತ್ತಿಗೆದಾರರ ಸಂಘವು ಖಾರವಾಗಿ ಪ್ರಶ್ನಿಸಿದೆ. ಸಾರ್ವಜನಿಕರ ಹಿತ ಕಾಯಬೇಕಾದ ಸರ್ಕಾರವೇ ಈ ರೀತಿ ಇಲಾಖೆಯನ್ನು ಖಾಸಗಿಯವರ ಪಾಲು ಮಾಡುತ್ತಿರುವುದು ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವ ಮತ್ತು ಕಷ್ಟಕಾಲದಲ್ಲಿ ಇಲಾಖೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಸ್ಥಳೀಯರನ್ನು ಮೂಲೆಗುಂಪು ಮಾಡಿ, ಖಾಸಗಿ ಕಂಪನಿಗಳಿಗೆ ಕೆಂಪು ಹಾಸು ಹಾಸುವ ಕೆಲಸವಾಗಿದೆ ಎಂದು ಪ್ರತಿಭಟನೆಯಲ್ಲಿ ಧ್ವನಿ ಎತ್ತಲಾಯಿತು.

ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಈ ನ್ಯಾಯಯುತ ಹಕ್ಕಿನ ಹೋರಾಟದಲ್ಲಿ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಸಿ. ರಮೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಹೆಚ್.ವಿ. ಚಂದ್ರಬಾಬು ಸೇರಿದಂತೆ ಇಡೀ ಒಕ್ಕೂಟವು ಮುಂಚೂಣಿಯಲ್ಲಿ ನಿಂತು ನೇತೃತ್ವ ವಹಿಸಿ ಸರ್ಕಾರದ ವಿರುದ್ಧ ಸಮರ ಸಾರಿದರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ವಿದ್ಯುತ್ ಗುತ್ತಿಗೆದಾರರು, ಕಟ್ಟಡ ಮಾಲೀಕರು ಮತ್ತು ಗ್ರಾಹಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಅಭೂತಪೂರ್ವ ಒಗ್ಗಟ್ಟು ಪ್ರದರ್ಶಿಸಿದರು. ಇನ್ನಾದರೂ ಸರ್ಕಾರ ತನ್ನ ಮೊಂಡಾಟವನ್ನು ಬಿಟ್ಟು ಗುತ್ತಿಗೆದಾರರ ಬೇಡಿಕೆಗಳಿಗೆ ಕಿವಿಗೊಡದಿದ್ದರೆ ಮುಂದಿನ ದಿನಗಳಲ್ಲಿ ಇಡೀ ವಿದ್ಯುತ್ ಕ್ಷೇತ್ರವೇ ಸ್ತಬ್ಧಗೊಳ್ಳಲಿದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಲಾಯಿತು.

ಈ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಸಂಘದ ಎಲ್ಲಾ ಸದಸ್ಯರು, ಕೇಂದ್ರ ಸಮಿತಿ ಪದಾಧಿಕಾರಿಗಳು, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರುಗಳು, ವಿವಿಧ ಸಮಿತಿಯ ಛೇರ್ಮನ್‌ಗಳು ಹಾಗೂ ಎಲ್ಲಾ ಜಿಲ್ಲಾ, ತಾಲ್ಲೂಕು ಮತ್ತು ಉಪಸಮಿತಿಯ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ವಿದ್ಯುತ್ ಗ್ರಾಹಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಈ ಹೋರಾಟವನ್ನು ಯಶಸ್ವಿಗೊಳಿಸಲು ಶ್ರಮಿಸಿದ ವಿದ್ಯುತ್ ಗುತ್ತಿಗೆದಾರರ ಸಂಘದ ಹೋರಾಟ ಸಮಿತಿಯ ಚೇರ್ಮನ್ ವೈ.ಎಚ್. ಆನಂದ್ ಹಾಗೂ ರಾಜ್ಯ ಪ್ರಚಾರ ಸಮಿತಿ ಚೇರ್ಮನ್ ಶಿವಕುಮಾರ್ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *