BBMP
Loading ...

BESCOM

Greater Bengaluru News9 : ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಸೇವೆಯನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆ ವಿರೋಧಿಸಿ ಶಿಡ್ಲಘಟ್ಟ ನಗರದಲ್ಲಿ ಬೆಸ್ಕಾಂ ನೌಕರರು ಹಾಗೂ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಬಾರದು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ಪ್ರಾಥಮಿಕ ಸಮಿತಿ ಕಾರ್ಯದರ್ಶಿ ಜಿ.ಆರ್. ಶ್ರೀಧರ್, ‘ಟಾಟಾ ಕಂಪನಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು, ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಖಾಸಗೀಕರಣದ ಮೂಲಕ ವಿದ್ಯುತ್ ಸೇವೆ ನೀಡಲು ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ’ ಎಂದು ಹೇಳಿದರು.

ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ವತಿಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡಲಾಗುತ್ತಿದೆ. ಖಾಸಗೀಕರಣ ಜಾರಿಯಾದರೆ ಸಾರ್ವಜನಿಕ ಸೇವೆಯ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ ಎಂದರು.

ಸಹಾಯಕ ಎಂಜಿನಿಯರ್ ವೇದಕಿರಣ್, ‘ಹಲವು ನೌಕರರ ತ್ಯಾಗ ಮತ್ತು ಪರಿಶ್ರಮದಿಂದ ಬೆಳೆದ ಸರ್ಕಾರಿ ಸಂಸ್ಥೆಗಳನ್ನು ಡಿ–ಲೈಸೆನ್ಸಿಂಗ್ ಮೂಲಕ ದುರ್ಬಲಗೊಳಿಸಲು ಯತ್ನಿಸಲಾಗುತ್ತಿದೆ’ ಎಂದು ಆರೋಪಿಸಿದರು.

ಖಾಸಗಿ ಕಂಪನಿಗಳು ಲಾಭದಾಯಕ ಪ್ರದೇಶಗಳಿಗೆ ಮಾತ್ರ ಸೇವೆ ನೀಡುವ ಸಾಧ್ಯತೆ ಇದ್ದು, ಗ್ರಾಮೀಣ ಹಾಗೂ ಬಡ ಜನರಿಗೆ ತೊಂದರೆ ಉಂಟಾಗಬಹುದು ಎಂದು ಎಚ್ಚರಿಸಿದರು.

ಖಾಸಗೀಕರಣದಿಂದ ಸರ್ಕಾರಿ ಸಂಸ್ಥೆಗಳ ಆದಾಯ ಕುಸಿದು ಮುಂದಿನ ದಿನಗಳಲ್ಲಿ ಬೆಸ್ಕಾಂ ಹಾಗೂ ಇತರ ಎಸ್ಕಾಂಗಳ ಸ್ಥಿತಿ ಬಿಎಸ್ಎನ್ಎಲ್‌ನಂತಾಗುವ ಭೀತಿ ಇದೆ. ಪ್ರತಿಭಟನಕಾರರು, ಖಾಸಗೀಕರಣದಿಂದ ಸಾರ್ವಜನಿಕರ ಮೇಲೆ ಹೆಚ್ಚುವರಿ ಆರ್ಥಿಕ ಭಾರ ಬೀಳುವ ಸಾಧ್ಯತೆ ಇದೆ. ನೌಕರರ ಸೇವಾ ಭದ್ರತೆಯೂ ಹದಗೆಡಬಹುದು ಎಂದರು.

ಈ ವೇಳೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ಅಧ್ಯಕ್ಷ ಡಿ.ಎನ್. ಶ್ರೀನಿವಾಸ್, ಕಾರ್ಯದರ್ಶಿ ಜಿ.ಆರ್. ಶ್ರೀಧರ್, ವೇದಕಿರಣ್, ಆರ್.ಸಿ. ಅನಂತ್ ಗೌಡ, ಡಿ. ಕೃಷ್ಣಪ್ಪ, ನಾಗಪ್ಪ, ಎಸ್.ಜಿ. ಶಶಿಕುಮಾರ್, ನಾಗರಾಜ್, ವಿ.ಕೆ. ಶ್ರೀನಿವಾಸ್ ಹಾಜರಿದ್ದರು.

Leave a Reply

Your email address will not be published. Required fields are marked *