BBMP
Loading ...

Doddanna

Greater Bengaluru News9 : ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಲೈಕ್ಸ್, ಶೇರ್ಸ್ ಹಾಗೂ ಫಾಲೋವರ್ಸ್ ಗಿಟ್ಟಿಸಿಕೊಳ್ಳಲು ಕಿಡಿಗೇಡಿಗಳು ನಡೆಸುತ್ತಿರುವ ಸುಳ್ಳು ಸುದ್ದಿಗಳ ಹಾವಳಿ ಈಗ ಮಿತಿಮೀರಿದ್ದು, ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರನ್ನೇ ದುಷ್ಕರ್ಮಿಗಳು ಸಾಯಿಸಿಬಿಟ್ಟಿದ್ದಾರೆ. ಹೌದು, ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ವದಂತಿಯನ್ನು ಜಾಲತಾಣದಲ್ಲಿ ಹರಿಬಿಟ್ಟು ವಿಕೃತ ಆನಂದ ಪಟ್ಟಿದ್ದ ಕಿಡಿಗೇಡಿಗಳಿಗೆ ಸ್ವತಃ ದೊಡ್ಡಣ್ಣ ಅವರೇ ಖಡಕ್ ತಿರುಗೇಟು ನೀಡಿದ್ದಾರೆ.

ನಾನಿನ್ನೂ ಆರಾಮಾಗಿ, ಜೀವಂತವಾಗಿಯೇ ಇದ್ದೇನೆ, ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡುವ ಪರಿಸ್ಥಿತಿ ಬಂದೊದಗಿರುವುದು ಜಾಲತಾಣಗಳ ಕರಾಳ ಮುಖವನ್ನು ಅನಾವರಣಗೊಳಿಸಿದ್ದು, ಸಾರ್ವಜನಿಕ ವಲಯದಲ್ಲಿ ಈ ಒಂದು ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ! ಅಲ್ಲದೆ, ವದಂತಿಗಳನ್ನು ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಗಳು ಕೇಳಿಬರುತ್ತಿವೆ.


ಹಿರಿಯ ನಟ ದೊಡ್ಡಣ್ಣ ಅವರು ತಮ್ಮ ಸಾವಿನ ಸುಳ್ಳು ವದಂತಿಗಳ ಕುರಿತು ವಿಡಿಯೋ ಮೂಲಕ ಮಾತನಾಡುತ್ತಾ, ಮೊದಲು ಕರ್ನಾಟಕದ ಸಮಸ್ತ ಜನತೆಗೆ ಹಾಗೂ ತಮ್ಮ ಅಭಿಮಾನಿಗಳಿಗೆ ಭಕ್ತಿಪೂರ್ವಕ ನಮಸ್ಕಾರಗಳನ್ನು ಸಲ್ಲಿಸಿದ್ದಾರೆ. ಆನಂತರ, ಇಂದು ಬೆಳಗ್ಗೆಯಿಂದಲೇ ತಾವಿನ್ನೂ ಬದುಕಿರುವಾಗಲೇ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಾವು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿರುವುದಾಗಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಈ ಸುಳ್ಳು ಸುದ್ದಿ ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಅತ್ಯಂತ ಆರೋಗ್ಯವಾಗಿದ್ದೇನೆ ಹಾಗೂ ನೆಮ್ಮದಿಯಾಗಿದ್ದೇನೆ. ನನ್ನ ಅಭಿಮಾನಿಗಳು ಮತ್ತು ಬಂಧುಗಳು ಇಂತಹ ವದಂತಿಗಳನ್ನು ಯಾವುದೇ ಕಾರಣಕ್ಕೂ ನಂಬಬಾರದು ಎಂದು ವಿನಂತಿಸಿಕೊಂಡಿದ್ದಾರೆ. ಬೆಳಗ್ಗೆಯಿಂದ ಈ ಸುಳ್ಳು ಸುದ್ದಿಯನ್ನು ನೋಡಿ ಗಾಬರಿಯಾದ ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳು ಸತತವಾಗಿ ತಮಗೆ ಫೋನ್ ಮಾಡುತ್ತಿರುವುದರಿಂದಲೇ ಈ ವಿಡಿಯೋ ಮೂಲಕ ಸ್ಪಷ್ಟನೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಕೊನೆಯಲ್ಲಿ, ತಮ್ಮ ಮೇಲೆ ಅಪಾರ ಪ್ರೀತಿ ಮತ್ತು ಕಾಳಜಿ ಇಟ್ಟುಕೊಂಡಿರುವ ಎಲ್ಲರಿಗೂ ದೊಡ್ಡಣ್ಣ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಕರ್ನಾಟಕದ ಜನರ ಆಶೀರ್ವಾದ ಇರುವವರೆಗೂ ನನಗೆ ಏನೂ ಆಗುವುದಿಲ್ಲ, ನಾನು ನೂರು ಕಾಲ ಚೆನ್ನಾಗಿರುತ್ತೇನೆ ಎಂದು ಹೇಳುತ್ತಾ, ಕಿಡಿಗೇಡಿಗಳ ಇಂತಹ ವಿಕೃತ ನಡೆಗೆ ಮಾಧ್ಯಮದ ಮೂಲಕ ತೆರೆ ಎಳೆದಿದ್ದಾರೆ.

ಕೇವಲ ಲೈಕ್ಸ್, ಶೇರ್ಸ್ ಮತ್ತು ಫಾಲೋವರ್ಸ್ ಗಳಿಸುವ ಹಪಾಹಪಿಗೆ ಬಿದ್ದು, ಬದುಕಿರುವ ಹಿರಿಯ ಚೇತನಗಳನ್ನೇ ಕಣ್ಮರೆ ಮಾಡುವ ಇಂತಹ ವಿಕೃತ ಮನಸ್ಥಿತಿಯ ಕಿಡಿಗೇಡಿಗಳಿಗೆ ಕಾನೂನಿನ ಸರಿಯಾದ ಚಾಟಿ ಬೀಸಬೇಕಿದೆ. ಇಂತಹ ಸೂಕ್ಷ್ಮ ವಿಷಯಗಳಲ್ಲಿ ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಹರಡುವುದು ಕೇವಲ ಒಂದು ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡುವುದಷ್ಟೇ ಅಲ್ಲದೆ, ಲಕ್ಷಾಂತರ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸುವ ಸಮಾಜದ್ರೋಹಿ ಕೆಲಸವಾಗಿದೆ. ಆದ್ದರಿಂದ, ಇಂತಹ ಸೋಶಿಯಲ್ ಮೀಡಿಯಾ ಪೇಜ್‌ಗಳು ಮತ್ತು ವ್ಯಕ್ತಿಗಳ ವಿರುದ್ಧ ಸೈಬರ್ ಕ್ರೈಮ್ ಪೊಲೀಸರು ಸ್ವಯಂಪ್ರೇರಿತವಾಗಿ ಕಠಿಣ ಕಾನೂನು ಕ್ರಮ ಕೈಗೊಂಡು, ಇವರ ಖಾತೆಗಳನ್ನು ಶಾಶ್ವತವಾಗಿ ನಿರ್ಬಂಧಿಸಬೇಕು. ಆಗ ಮಾತ್ರ ಡಿಜಿಟಲ್ ಜಗತ್ತಿನಲ್ಲಿ ಬೇಜವಾಬ್ದಾರಿತನಕ್ಕೆ ಬ್ರೇಕ್ ಹಾಕಿ, ಸಮಾಜಕ್ಕೆ ಒಂದು ಸರಿಯಾದ ಸಂದೇಶ ರವಾನಿಸಲು ಸಾಧ್ಯ.

Leave a Reply

Your email address will not be published. Required fields are marked *