Greater Bengaluru News9 : ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯವರ ಸಚಿವಾಲಯದ ಉನ್ನತ ಅಧಿಕಾರಿಗಳ ನಡುವೆ ಇಲಾಖಾವಾರು ಜವಾಬ್ದಾರಿಗಳನ್ನು ಪರಿಷ್ಕರಿಸಿ, ಕರ್ತವ್ಯಗಳನ್ನು ಮರು ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಸಿಎಂ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್ ಅವರು ಈ ಕುರಿತು ಅಧಿಕೃತ ಟಿಪ್ಪಣಿ ಹೊರಡಿಸಿದ್ದು, ಸಚಿವಾಲಯದ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಈ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ (ACS) ತುಷಾರ್ ಗಿರಿ ನಾಥ್ (IAS) ಅವರು ಹಣಕಾಸು, ಗೃಹ, ಲೋಕೋಪಯೋಗಿ, ನಗರಾಭಿವೃದ್ಧಿ (ಬೆಂಗಳೂರು ಅಭಿವೃದ್ಧಿ ಸೇರಿದಂತೆ), ಜಲಸಂಪನ್ಮೂಲ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR), ಇಂಧನ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆಯಂತಹ ಪ್ರಮುಖ ಇಲಾಖೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇದರೊಂದಿಗೆ ಸರ್ಕಾರದ ನೀತಿ ನಿರ್ಧಾರಗಳು, ಅಂತರರಾಜ್ಯ ನೀರು ವಿವಾದಗಳು, ಮೂಲಸೌಕರ್ಯ ಯೋಜನೆಗಳು ಮತ್ತು ಕೇಂದ್ರ ಸರ್ಕಾರದೊಂದಿಗಿನ ಪತ್ರವ್ಯವಹಾರಗಳ ಸಂಪೂರ್ಣ ಉಸ್ತುವಾರಿಯನ್ನು ಇವರೇ ವಹಿಸಲಿದ್ದಾರೆ. ಇನ್ನು ಮುಖ್ಯಮಂತ್ರಿಯವರ ಕಾರ್ಯದರ್ಶಿ ರಾಜೇಂದ್ರ ಚೋಲನ್ (IAS) ಅವರಿಗೆ ಕೆ.ಎ.ಎಸ್ (KAS) ಅಧಿಕಾರಿಗಳ ವರ್ಗಾವಣೆ, ಆರ್.ಡಿ.ಪಿ.ಆರ್, ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಾಲಾ ಮತ್ತು ಉನ್ನತ ಶಿಕ್ಷಣ, ಸಾರಿಗೆ, ಮಾಹಿತಿ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಹೊಣೆಗಾರಿಕೆ ನೀಡಲಾಗಿದೆ.
ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್ ಎಂ.ಎನ್ ಅವರಿಗೆ ಸಣ್ಣ ನೀರಾವರಿ, ಸಹಕಾರ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ವಸತಿ ಮತ್ತು ಕಾರ್ಮಿಕ ಇಲಾಖೆಗಳನ್ನು ಹಂಚಿಕೆ ಮಾಡಲಾಗಿದ್ದು, ಇವರು ಬೆಂಗಳೂರು ವಿಭಾಗದ ಶಾಸಕರು/ಸಂಸದರ ಒಳಗೊಂಡ ಅಭಿವೃದ್ಧಿ ವಿಷಯಗಳು ಹಾಗೂ ಸಿಎಂ ಅಧ್ಯಕ್ಷತೆಯ ಸಭೆಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಜಂಟಿ ಕಾರ್ಯದರ್ಶಿ/ಉಪ ಕಾರ್ಯದರ್ಶಿ-1 ರವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಹಾಗೂ ಬೆಳಗಾವಿ ವಿಭಾಗದ ಜವಾಬ್ದಾರಿ ನೀಡಲಾಗಿದೆ. ಜಂಟಿ ಕಾರ್ಯದರ್ಶಿ/ಉಪ ಕಾರ್ಯದರ್ಶಿ-2 ಅವರಿಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯೊಂದಿಗೆ ಕಲಬುರಗಿ ವಿಭಾಗದ ಉಸ್ತುವಾರಿ ನೀಡಿದ್ದರೆ, ಜಂಟಿ ಕಾರ್ಯದರ್ಶಿ/ಉಪ ಕಾರ್ಯದರ್ಶಿ-3 ಅವರಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಗಳು ಹಾಗೂ ಮೈಸೂರು ವಿಭಾಗದ ಕ್ಷೇತ್ರಗಳ ಅಭಿವೃದ್ಧಿ ವಿಷಯಗಳನ್ನು ವಹಿಸಲಾಗಿದೆ.
ಇನ್ನು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗೆ (OSD) ದಿನನಿತ್ಯದ ಸಾರ್ವಜನಿಕ ಕುಂದುಕೊರತೆಗಳು, ಪತ್ರಿಕೆ, ದೂರದರ್ಶನ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲ್ವಿಚಾರಣೆ, ಮುಖ್ಯಮಂತ್ರಿಗಳ ಪ್ರೋಟೋಕಾಲ್ ಕರ್ತವ್ಯಗಳು ಹಾಗೂ ಸಿಎಂ ಅವರ ಅಧಿಕೃತ ನಿವಾಸ ಮತ್ತು ಗೃಹ ಕಚೇರಿಯ ನಿರ್ವಹಣೆಯ ಜವಾಬ್ದಾರಿಯನ್ನು ನೀಡಲಾಗಿದೆ. ಈ ಆದೇಶದ ಅನ್ವಯ, ಸಚಿವಾಲಯದ ಎಲ್ಲಾ ಅಧಿಕಾರಿಗಳು ತಮಗೆ ಹಂಚಿಕೆಯಾದ ಇಲಾಖೆಗಳ ಕಡತಗಳನ್ನು ಮುಖ್ಯಮಂತ್ರಿಯವರ ಅನುಮೋದನೆಗಾಗಿ ಮಂಡಿಸಬೇಕಿರುತ್ತದೆ. ಅಲ್ಲದೆ, ಎಲ್ಲಾ ಅಧಿಕಾರಿಗಳೂ ಕಡ್ಡಾಯವಾಗಿ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಗಳ (ACS) ಮಾರ್ಗದರ್ಶನ, ಮೇಲ್ವಿಚಾರಣೆ ಹಾಗೂ ಅವರ ಅಧೀನದಲ್ಲೇ ಕರ್ತವ್ಯ ನಿರ್ವಹಿಸಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.


