Greater Bengaluru News9 : ಬೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ಮಹತ್ವದ ಸೂಚನೆ ಬಂದಿದ್ದು ಜೂನ್ 10 ರಿಂದ ಜೂನ್ 30, 2026 ರವರೆಗೆ ಸಂಪೂರ್ಣ 21 ದಿನಗಳ ಕಾಲ ಆನ್ಲೈನ್ ಸೇವೆಗಳು ಸ್ಥಗಿತಗೊಳ್ಳಲಿವೆ. ಭಾರತ ಸರ್ಕಾರದ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (IPDS) ಹಂತ-2 ರಡಿಯಲ್ಲಿ ಹೊಸ ಆಧುನಿಕ ಸಾಫ್ಟ್ವೇರ್ ಅಳವಡಿಕೆ ಮತ್ತು ಡೇಟಾ ಮೈಗ್ರೇಶನ್ ಕಾರ್ಯ ನಡೆಯಲಿದ್ದು ಈ ತಾತ್ಕಾಲಿಕ ಸ್ಥಗಿತ ಅನಿವಾರ್ಯವಾಗಿದೆ.
ಕರ್ನಾಟಕದಲ್ಲಿ ಒಟ್ಟು 124 ಪಟ್ಟಣಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದ್ದು ಬೆಸ್ಕಾಂ ವ್ಯಾಪ್ತಿಯ 20 ಪಟ್ಟಣಗಳಿಗೆ 62.28 ಕೋಟಿ ರೂ. ಅನುದಾನ ಮಂಜೂರಾಗಿ Power Finance Corporation (PFC) ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಈ ಅವಧಿಯಲ್ಲಿ ಹೊಸ ವಿದ್ಯುತ್ ಸಂಪರ್ಕ, ಹೆಸರು ಬದಲಾವಣೆ, ಲೋಡ್ ಹೆಚ್ಚಳ-ಕಡಿತ, ಟ್ರ್ಯಾಕಿಂಗ್ ಮತ್ತು ಅರ್ಜಿ ಸಲ್ಲಿಕೆ ಸೇರಿದಂತೆ ಅಧಿಕೃತ ಪೋರ್ಟಲ್ನ ಎಲ್ಲಾ ಆನ್ಲೈನ್ ಸೇವೆಗಳು ಸ್ಥಗಿತಗೊಳ್ಳಲಿವೆ. ಆದರೆ ಒಂದು ಸಿಹಿ ಸುದ್ದಿ ಎಂದರೆ Google Pay ಮತ್ತು PhonePe ಸೇರಿದಂತೆ UPI ಆಧಾರಿತ ಅಪ್ಲಿಕೇಶನ್ಗಳ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಬಹುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಪ್ರಭಾವಕ್ಕೆ ಒಳಗಾಗುವ 20 ಪಟ್ಟಣಗಳ ಸಂಪೂರ್ಣ ಪಟ್ಟಿ ಇಲ್ಲಿದೆ. ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮುರು, ಪಾವಗಡ ಮತ್ತು ತುರುವೇಕೆರೆ.
ಈ 21 ದಿನಗಳಲ್ಲಿ ತುರ್ತು ಕೆಲಸ ಇದ್ದರೆ ಹತ್ತಿರದ ಬೆಸ್ಕಾಂ ಕಚೇರಿಗೆ ನೇರ ಭೇಟಿ ನೀಡಿ ಅಥವಾ 24×7 ಹೆಲ್ಪ್ಲೈನ್ 1912 ಗೆ ಕರೆ ಮಾಡಿ. ಬಿಲ್ ಪಾವತಿಗೆ KarnatakaOne ಕೂಡ ಬಳಸಬಹುದು. ಸಾಫ್ಟ್ವೇರ್ ಅಪ್ಗ್ರೇಡ್ ಪೂರ್ಣಗೊಂಡ ನಂತರ GIS, EAM, MDM ಮಾಡ್ಯೂಲ್ಗಳನ್ನು ಒಳಗೊಂಡ ಆಧುನಿಕ ಡಿಜಿಟಲ್ ವ್ಯವಸ್ಥೆಯಿಂದ ಸೇವೆ ಇನ್ನಷ್ಟು ತ್ವರಿತ ಮತ್ತು ಸರಳವಾಗಲಿದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದ್ದು ಸಾರ್ವಜನಿಕರ ಸಹಕಾರ ಕೋರಿದೆ.


