BBMP
Loading ...

Rice

Greater Bengaluru News9 : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟ ಎದುರಿಸುತ್ತಿರುವ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ತರಕಾರಿ ಬೆಲೆ ಏರಿಕೆಯ ನಡುವೆಯೇ ಇದೀಗ ವಿವಿಧ ತಳಿಯ ಅಕ್ಕಿ ದರದಲ್ಲೂ ಗಣನೀಯ ಏರಿಕೆ ಕಂಡುಬಂದಿದ್ದು, ಗ್ರಾಹಕರ ಜೇಬಿನ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ.

ಮಾರುಕಟ್ಟೆಯಲ್ಲಿ ವಿವಿಧ ತಳಿಯ ಅಕ್ಕಿಗಳ ಬೆಲೆ ಕೆ.ಜಿಗೆ 10 ರಿಂದ 20 ರೂಪಾಯಿವರೆಗೆ ಏರಿಕೆಯಾಗಿದೆ. ಅಕ್ಕಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಪೂರೈಕೆ ಕಡಿಮೆಯಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಇದಲ್ಲದೆ, ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ಅಕ್ಕಿ ರಫ್ತಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಕುಂಠಿತಗೊಂಡಿದೆ. ಇದರ ಪರಿಣಾಮವಾಗಿ ರಾಜ್ಯ ಸೇರಿದಂತೆ ಹಲವು ಭಾಗಗಳಲ್ಲಿ ಅಕ್ಕಿ ಬೆಲೆ ಏರಿಕೆ ಕಂಡುಬರುತ್ತಿದೆ ಎಂದು ವ್ಯಾಪಾರ ವಲಯದ ಮೂಲಗಳು ತಿಳಿಸಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ಟೀಮ್ ರೈಸ್ ದರ ಕೆ.ಜಿಗೆ 42 ರೂಪಾಯಿಯಿಂದ 56 ರೂಪಾಯಿಗೆ ಏರಿಕೆಯಾಗಿದೆ. ರಾ ರೈಸ್ ದರ 50 ರೂಪಾಯಿಯಿಂದ 62 ರೂಪಾಯಿಗೆ ಹೆಚ್ಚಳವಾಗಿದ್ದು, ಕೋಲಂ ರೈಸ್ ಬೆಲೆ 68 ರೂಪಾಯಿಯಿಂದ 80 ರೂಪಾಯಿಗೆ ಜಿಗಿದಿದೆ. ಹಾಗೆಯೇ ಕೋಲಂ ಸ್ಟೀಮ್ ಅಕ್ಕಿ ದರ 55 ರೂಪಾಯಿಯಿಂದ 65 ರೂಪಾಯಿಗೆ ಏರಿಕೆಯಾಗಿದೆ.

ಹೊಸ ಅಕ್ಕಿ ಬೆಳೆ ನವೆಂಬರ್ ವೇಳೆಗೆ ಮಾರುಕಟ್ಟೆಗೆ ಬರಲಿದ್ದು, ಅದುವರೆಗೆ ಪೂರೈಕೆ ಕೊರತೆ ಮುಂದುವರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಆತಂಕವೂ ವ್ಯಕ್ತವಾಗಿದೆ.

ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಕುಟುಂಬದ ಖರ್ಚು ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿನನಿತ್ಯದ ಜೀವನ ನಿರ್ವಹಣೆಯೇ ಸವಾಲಾಗುತ್ತಿರುವ ಸಂದರ್ಭದಲ್ಲಿ ಅಕ್ಕಿ ದರ ಹೆಚ್ಚಳವು ಮಧ್ಯಮ ಮತ್ತು ಬಡ ವರ್ಗದ ಜನರಿಗೆ ಮತ್ತಷ್ಟು ಹೊರೆ ತಂದಿದೆ.

Leave a Reply

Your email address will not be published. Required fields are marked *