BBMP
Loading ...

Rowdy

Greater Bengaluru News9 : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ರಾಜ್ಯದಲ್ಲಿ ರೌಡಿಗಳ ನಿಗ್ರಹಕ್ಕೆ ಪ್ರತ್ಯೇಕ ಪಡೆ ಆರಂಭಿಸುವುದಾಗಿ ಹೇಳಿದ ಬೆನ್ನಲ್ಲೇ ಪ್ರತಿ ಪೊಲೀಸ್‌ ವಲಯ ಹಾಗೂ ಠಾಣೆ ಮಟ್ಟದಲ್ಲಿ ರೌಡಿ ನಿಗ್ರಹ ದಳ ರಚಿಸುವಂತೆ ಸೂಚಿಸಿ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸಲು ಹಾಗೂ ರೌಡಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಗಾಗಿ ಪ್ರತಿ ಪೊಲೀಸ್‌ ವಲಯ ಮತ್ತು ಪೊಲೀಸ್‌ ಠಾಣೆ ಮಟ್ಟದಲ್ಲಿ ರೌಡಿ ನಿಗ್ರಹ ದಳ ಆರಂಭಿಸುತ್ತಿರುವುದಾಗಿ ಸಲೀಂ ಆದೇಶದಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ನಿರ್ದೇಶನದಂತೆ, ರೌಡಿಗಳು ಹಾಗೂ ರೌಡಿ ಚಟುವಟಿಕೆಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕರ್ನಾಟಕ ಪೊಲೀಸ್‌ ಮ್ಯಾನ್ಯುಯಲ್‌ ಪ್ರಕಾರ, ರೌಡಿ ಅಂಶಗಳ ಗುರುತಿಸುವಿಕೆ, ನೋಂದಣಿ ಹಾಗೂ ನಿಗಾ ವಹಿಸಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ಸಲೀಂ ಆದೇಶದಲ್ಲಿ ಹೇಳಿದ್ದಾರೆ.

ಪೊಲೀಸ್‌ ಪ್ರಧಾನ ಕಚೇರಿಯ ನಿರ್ದೇಶನದಂತೆ ಎಲ್ಲಾ ಪೊಲೀಸ್‌ ಅಧಿಕಾರಿಗಳು, ರೌಡಿಗಳು ಮತ್ತು ರೌಡಿ ಚಟುವಟಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಬೇಕು. ಸರ್ಕಲ್‌ ಇನ್ಸ್‌ಪೆಕ್ಟರ್‌ಗಳ ಮೇಲ್ವಿಚಾರಣೆಯಲ್ಲಿ ಪ್ರತಿ ವಲಯದಲ್ಲಿ ರೌಡಿ ನಿಗ್ರಹ ದಳ ರಚಿಸಬೇಕು. ಇನ್ಸ್‌ಪೆಕ್ಟರ್‌ಗಳ ನೇತೃತ್ವದ ಠಾಣೆಗಳಲ್ಲಿ ಪ್ರತ್ಯೇಕ ದಳ ರಚಿಸಲಾಗುವುದು. ಇದರ ಸಂಯೋಜನೆ, ಸ್ಥಳೀಯ ಅಗತ್ಯತೆ ಮತ್ತು ಅಪರಾಧ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉಪ ವಿಭಾಗದ ಪೊಲೀಸ್‌ ಅಧಿಕಾರಿ ಅಥವಾ ಎಸಿಪಿ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರೌಡಿ ನಿಗ್ರಹ ದಳವು ಅಪರಾಧ ಪ್ರಕರಣಗಳನ್ನು ಪರಿಶೀಲಿಸಿ, ಹೊಸ ರೌಡಿ ಪಟ್ಟಿ ತೆರೆಯಬೇಕು. ರೌಡಿ ಶೀಟರ್‌ಗಳ ಚಲನವಲನ ಮತ್ತು ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಹೊಸ ರೌಡಿಗಳು, ಗ್ಯಾಂಗ್‌ಗಳು ಮತ್ತು ಅಪರಾಧ ಗುಂಪುಗಳನ್ನು ಗುರುತಿಸಿ ಗುಪ್ತಚರ ಮಾಹಿತಿ ಸಂಗ್ರಹಿಸಬೇಕು. ಪಿಎಆರ್‌, ಗೂಂಡಾ ಕಾಯಿದೆ, ಕೆಸಿಒಸಿಎ ಕಾಯಿದೆ ಮುಂತಾದ ಕಾನೂನು ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಗಸ್ತು ಸಿಬ್ಬಂದಿ ಮತ್ತು ಸ್ಥಳೀಯ ಗುಪ್ತಚರ ಮೂಲಗಳೊಂದಿಗೆ ನಿಕಟ ಸಂಪರ್ಕ ಕಾಯ್ದುಕೊಳ್ಳಬೇಕು. ಅಪಾಯದ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ಮತ್ತು ದಿಢೀರ್‌ ತಪಾಸಣೆ ನಡೆಸಬೇಕು. ಈ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಸಲೀಂ ಸೂಚಿಸಿದ್ದಾರೆ.

ಆದೇಶದಲ್ಲಿನ ಅಂಶಗಳು

  • ಸರ್ಕಲ್‌ ಇನ್ಸ್‌ಪೆಕ್ಟರ್‌ಗಳು ಅಥವಾ ಠಾಣಾ ಅಧಿಕಾರಿಗಳು ನಿಯಮಿತವಾಗಿ ರೌಡಿ ನಿಗ್ರಹ ದಳದ ಕಾರ್ಯಕ್ಷಮತೆ ಪರಿಶೀಲಿಸಬೇಕು.
  • ಎಸ್‌ಡಿಪಿಒಗಳು ಮತ್ತು ಎಸಿಪಿಗಳು ಮಾಸಿಕ ಅಪರಾಧ ಸಭೆಗಳಲ್ಲಿ ರೌಡಿ ನಿಗ್ರಹ ದಳದ ಕಾರ್ಯಕ್ಷಮತೆ ವಿಮರ್ಶಿಸಬೇಕು.
  • ರೌಡಿ ನಿಗ್ರಹ ದಳದ ಚಟುವಟಿಕೆಗಳ ದಾಖಲಾತಿಗಾಗಿ ಪ್ರತ್ಯೇಕ ರಿಜಿಸ್ಟರ್‌ ಇರಬೇಕು ಮತ್ತು ಮಾಸಿಕ ವರದಿಯನ್ನು ಡಿಓ ಪತ್ರದ ರೂಪದಲ್ಲಿ ಸಲ್ಲಿಸಬೇಕು.
  • ಪೊಲೀಸ್‌ ಅಧಿಕಾರಿಗಳು ರೌಡಿಗಳು ಮತ್ತು ಅಸಾಮಾಜಿಕ ಚಟುವಟಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಬೇಕು.
  • ಬೆದರಿಕೆ, ಬಲವಂತದಿಂದ ಹಣ ಸಂಗ್ರಹಣೆ, ಗ್ಯಾಂಗ್‌ ಚಟುವಟಿಕೆ ಅಥವಾ ಸಾರ್ವಜನಿಕ ಅಶಾಂತಿ ಕಂಡು ಬಂದರೆ ಕಾನೂನು ಪ್ರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.
  • ಪೊಲೀಸ್‌ ಘಟಕಾಧಿಕಾರಿಗಳು ರೌಡಿ ನಿಗ್ರಹ ದಳ ರಚಿಸಿ 7 ದಿನದಲ್ಲಿ ವರದಿ ಸಲ್ಲಿಸಬೇಕು.

Leave a Reply

Your email address will not be published. Required fields are marked *