BBMP
Loading ...

dks (3)

Greater Bengaluru News9 : ಬೆಂಗಳೂರು: ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಸಾರ್ವಜನಿಕರಿಗೆ ಭರ್ಜರಿ ಕೊಡುಗೆಯನ್ನು ನೀಡಲಾಗಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ಸರ್ಕಾರದ ವತಿಯಿಂದ ಮಹತ್ವದ ‘ಭೂ ಗ್ಯಾರಂಟಿ’ಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಮೂಲಕ ಸರ್ಕಾರವು ತನ್ನ ಭರವಸೆಗಳ ಸಾಲಿಗೆ 6ನೇ ಗ್ಯಾರಂಟಿಯನ್ನು ಸೇರಿಸುವ ಮೂಲಕ ನಾಡಿನ ಆಸ್ತಿ ಮತ್ತು ಮನೆ ಮಾಲೀಕರ ದೀರ್ಘಕಾಲದ ಸಮಸ್ಯೆಗಳಿಗೆ ನೇರ ಪರಿಹಾರ ಒದಗಿಸಲು ಮುಂದಾಗಿದೆ.

ಒಸಿ ವಿನಾಯಿತಿ
ಈ ಐತಿಹಾಸಿಕ ತೀರ್ಮಾನದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವ ಮಧ್ಯಮ ವರ್ಗದ ಜನರಿಗೆ ಸರ್ಕಾರ ಅತಿ ದೊಡ್ಡ ರಿಲೀಫ್ ನೀಡಿದೆ. ನಿಯಮಗಳ ಉಲ್ಲಂಘನೆ ಅಥವಾ ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಇಲ್ಲದ ಕಾರಣಕ್ಕೆ ವಿದ್ಯುತ್ ಸಂಪರ್ಕ ಸಿಗದೆ ಪರದಾಡುತ್ತಿದ್ದ ಮಾಲೀಕರಿಗೆ ನೆರವಾಗಲು, 3 ಅಂತಸ್ತಿನ ವರೆಗಿನ ಕಟ್ಟಡಗಳಿಗೆ ಹಾಗೂ 2,500 ಚದರ ಅಡಿ ವಿಸ್ತೀರ್ಣದವರೆಗೆ (ಶೇ.20 ಹೆಚ್ಚುವರಿ ಒಳಗೊಂಡಂತೆ) ಮೇ 31ರ ಒಳಗೆ ಮನೆ ನಿರ್ಮಿಸಿ ಅರ್ಜಿ ಸಲ್ಲಿಸಿದವರಿಗೆ ಒಸಿ (OC) ನಿಯಮದಿಂದ ಸಂಪೂರ್ಣ ವಿನಾಯ್ತಿ ನೀಡುವುದಾಗಿ ಘೋಷಿಸಲಾಗಿದೆ. ಇದು ಕೇವಲ ಬೆಂಗಳೂರಿಗೆ ಮಾತ್ರವಲ್ಲದೆ ರಾಜ್ಯದ ಎಲ್ಲಾ ಪಂಚಾಯಿತಿ, ಪಟ್ಟಣ ಹಾಗೂ ನಗರ ಪ್ರದೇಶಗಳಿಗೂ ಅನ್ವಯವಾಗಲಿದೆ.

ಎ-ಖಾತಾ ಪರಿವರ್ತನೆ
ಮತ್ತೊಂದು ಪ್ರಮುಖ ನಿರ್ಧಾರವಾಗಿ, ಇದುವರೆಗೆ ಕೇವಲ ರಾಜಧಾನಿ ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ‘ಬಿ-ಖಾತಾದಿಂದ ಎ-ಖಾತಾ’ ಪರಿವರ್ತನೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಈಗ ಇಡೀ ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ. ಅರ್ಹ ಭೂಮಿಯಲ್ಲಿ ಆಸ್ತಿ ಹೊಂದಿರುವ ಇಡೀ ರಾಜ್ಯದ ನಗರ ಮತ್ತು ಪಟ್ಟಣ ಪ್ರದೇಶಗಳ ಸಾರ್ವಜನಿಕರು ಇದರ ಲಾಭವನ್ನು ಪಡೆಯಲಿದ್ದು, ತಮ್ಮ ಜಾಗದ ಹಕ್ಕುಗಳನ್ನು ಕಾನೂನುಬದ್ಧಗೊಳಿಸಿಕೊಳ್ಳಲು ಈ ನಿರ್ಧಾರದಿಂದ ದೊಡ್ಡ ಸುಲಭ ಅವಕಾಶ ಸಿಕ್ಕಂತಾಗಿದೆ. ಇದರೊಂದಿಗೆ ಬೆಂಗಳೂರು ನಗರದ ರಸ್ತೆ ಮೂಲಸೌಕರ್ಯ ವೃದ್ಧಿಗಾಗಿ ಈಗಾಗಲೇ ಕೈಗೊಂಡಿರುವ ತೀರ್ಮಾನಗಳ ಜೊತೆಗೆ, ಹೊಸದಾಗಿ 2,000 ಕೋಟಿ ರೂಪಾಯಿಗಳನ್ನು ರಸ್ತೆ ಡಾಂಬರೀಕರಣಕ್ಕಾಗಿ ಮೀಸಲಿಡಲಾಗಿದೆ.

ಒಳಗೊಂಡ ಭಾರತ್ ಜೋಡೋ ಯುವಕ ಸಂಘ
ಯುವಶಕ್ತಿಯನ್ನು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಲು ಮತ್ತು ಸಾಮಾಜಿಕ ಸೌಹಾರ್ದತೆ, ಸಾಂಸ್ಕೃತಿಕ, ಕ್ರೀಡೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಲು ಪ್ರತಿ ಪಂಚಾಯಿತಿಯಲ್ಲೂ ನೂರು ಸದಸ್ಯರನ್ನು ಒಳಗೊಂಡ ‘ಭಾರತ್ ಜೋಡೋ ಯುವಕ ಸಂಘ’ಗಳನ್ನು ರಚಿಸಲು ಸರ್ಕಾರ ತೀರ್ಮಾನಿಸಿದೆ. ರಾಜ್ಯಾದ್ಯಂತ ಒಟ್ಟು 10,000 ಯುವಕ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಈ ಯೋಜನೆಗೆ ಆಯ್ಕೆಯಾಗುವ ಪ್ರತಿ ಸಂಘಕ್ಕೆ ಸರ್ಕಾರದಿಂದ ತಲಾ 10 ಲಕ್ಷ ರೂಪಾಯಿಗಳ ಬೃಹತ್ ಧನಸಹಾಯವನ್ನು ನೀಡಲು ಚಿಂತನೆ ನಡೆಸಲಾಗಿದೆ.

ಸರ್ಕಾರವೇ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಸರಣಿ ಕೊಡುಗೆಗಳನ್ನು ಘೋಷಿಸಿರುವ ಸರ್ಕಾರ, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56 ಸಾವಿರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಇದರೊಂದಿಗೆ, ಖಾಸಗಿ ವಲಯದಲ್ಲಿ ಕೆಲಸ ಹುಡುಕುವವರಿಗಾಗಿ ಸರ್ಕಾರದಿಂದಲೇ ವಿಶೇಷ ಆನ್‌ಲೈನ್ ವೇದಿಕೆಯೊಂದನ್ನು ಸೃಷ್ಟಿಸಲಾಗುತ್ತಿದ್ದು, ಹೋಟೆಲ್, ಆಸ್ಪತ್ರೆ ಸೇರಿದಂತೆ ವಿವಿಧ ವರ್ಗಗಳ ಅಗತ್ಯಕ್ಕೆ ತಕ್ಕಂತೆ ನೋಂದಣಿ ಮಾಡಿಸಿ, ಸರ್ಕಾರವೇ ತರಬೇತಿ ಕೊಡಿಸಿ ಉದ್ಯೋಗಾವಕಾಶ ಕಲ್ಪಿಸಲಿದೆ. ಈ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಇರಲಿದ್ದು, ವಿದೇಶದಲ್ಲಿ ಕೆಲಸ ಹುಡುಕುವವರಿಗೂ ಇದು ಅನುಕೂಲವಾಗಲಿದೆ. ಈ ಇಡೀ ಯೋಜನೆಗೆ ತಿಂಗಳೊಳಗೆ ಒಂದು ಸ್ಪಷ್ಟ ರೂಪ ಕೊಡಲು ಸಂಪುಟದ ಮೂವರು ಸಚಿವರಿಗೆ ಜವಾಬ್ದಾರಿ ವಹಿಸಲಾಗಿದೆ.

ಉಚಿತ ಬಸ್​ ಪಾಸ್​
ಶಿಕ್ಷಣ ಕ್ಷೇತ್ರಕ್ಕೂ ಭರ್ಜರಿ ಉಡುಗೊರೆ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದ ಎಲ್ಲ ಹಂತದ ವಿದ್ಯಾರ್ಥಿಗಳಿಗೂ ‘ಫ್ರೀ ಬಸ್ ಪಾಸ್’ ಸೌಲಭ್ಯವನ್ನು ಘೋಷಿಸಿದ್ದಾರೆ. ಈ ಉಚಿತ ಬಸ್ ಪಾಸ್ ಸೌಲಭ್ಯವನ್ನು ಪಡೆಯಲು ವಿದ್ಯಾರ್ಥಿಗಳು ಅಧಿಕೃತವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಆಡಳಿತದ ಮೊದಲ ದಿನವೇ ಇಂತಹ ಹತ್ತಾರು ಜನಪರ, ಆರ್ಥಿಕ ಹಾಗೂ ಮೂಲಸೌಕರ್ಯ ಆಧಾರಿತ ನಿರ್ಧಾರಗಳನ್ನು ಪ್ರಕಟಿಸುವ ಮೂಲಕ ನೂತನ ಸರ್ಕಾರವು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ.

Leave a Reply

Your email address will not be published. Required fields are marked *