Greater Bengaluru News9 : ಸಾರ್ವಜನಿಕರ ರಕ್ತ ಹೀರುವ ಭ್ರಷ್ಟ ಅಧಿಕಾರಶಾಹಿಯ ಅಟ್ಟಹಾಸಕ್ಕೆ ರಾಜಧಾನಿಯಲ್ಲಿ ಮತ್ತೊಂದು ಜೀವಂತ ಸಾಕ್ಷಿ ಸಿಕ್ಕಿದೆ. ಜನಸಾಮಾನ್ಯರ ತೆರಿಗೆ ಹಣದಲ್ಲಿ ರಾಜಾತಿರಾಜನಂತೆ ಬದುಕುವ ಸರ್ಕಾರಿ ನೌಕರರ ಲಂಚದ ದಾಹ ಎಷ್ಟು ಕಟುವಾಗಿದೆ ಎಂಬುದಕ್ಕೆ ಬೆಸ್ಕಾಂ ಜಾಗೃತದಳದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಬಸವರಾಜ್ ಎಂಬಾತನೇ ದೊಡ್ಡ ಉದಾಹರಣೆ. ಮಲ್ಲೇಶ್ವರಂ ಗುಟ್ಟಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್ ಒಂದರ ವಿದ್ಯುತ್ ಬಿಲ್ ಸಮಸ್ಯೆಯನ್ನು ಇತ್ಯರ್ಥಪಡಿಸುವ ನೆಪದಲ್ಲಿ ಈತ ಇಟ್ಟಿದ್ದ ಲಂಚದ ಬೇಡಿಕೆ ಕೇಳಿದರೆ ಇಡೀ ವ್ಯವಸ್ಥೆಯೇ ತಲೆತಗ್ಗಿಸುವಂತಿದೆ. ಬರೋಬ್ಬರಿ 65 ಲಕ್ಷ ರೂಪಾಯಿಗಳಿಗೆ ಆಸೆ ಬಿದ್ದಿದ್ದ ಈ ಭ್ರಷ್ಟ ತಿಮಿಂಗಿಲ ಕೊನೆಗೂ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವುದು ಸಾರ್ವಜನಿಕರಲ್ಲಿ ಸಣ್ಣದೊಂದು ಆಶಾಭಾವನೆ ಮೂಡಿಸಿದೆ.
ಮಲ್ಲೇಶ್ವರಂ ಉಡುಪಿ ಹೋಟೆಲ್ ಹತ್ತಿರ 15 ಲಕ್ಷ ಲಂಚವನ್ನು ಸ್ವೀಕರಿಸುವ ಸಂದರ್ಭದಲ್ಲಿ ಎಇಇ ಬಸವರಾಜ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
ವಿದ್ಯುತ್ ಬಿಲ್ ಸಮಸ್ಯೆಯನ್ನು ಬಗೆಹರಿಸುವುದು ಇಲಾಖೆಯ ನಿಯಮಾವಳಿಗಳ ಪ್ರಕಾರ ಅಧಿಕಾರಿಯ ಕರ್ತವ್ಯ. ಆದರೆ, ಆ ಕರ್ತವ್ಯವನ್ನೇ ಬಂಡವಾಳ ಮಾಡಿಕೊಂಡ ಈ ಎಇಇ ಬಸವರಾಜ್, ನೊಂದವರಿಂದ ಕೋಟ್ಯಂತರ ರೂಪಾಯಿ ಲೂಟಿ ಮಾಡಲು ಸಂಚು ರೂಪಿಸಿದ್ದ. ಇಲಾಖೆಯಲ್ಲಿ ನ್ಯಾಯ ಒದಗಿಸಬೇಕಾದ ಜಾಗೃತದಳದಲ್ಲೇ ಕುಳಿತುಕೊಂಡು ಇಂತಹ ಹಗಲು ದರೋಡೆಗೆ ಕೈಹಾಕಿರುವುದು ಬೆಸ್ಕಾಂನ ಜಾಗೃತದಳ ಎಷ್ಟು ‘ಜಾಗೃತ’ವಾಗಿದೆ ಎಂಬುದನ್ನು ಅಣಕಿಸುವಂತಿದೆ. ಅಧಿಕಾರಿಗಳ ಇಂತಹ ದರ್ಪ ಮತ್ತು ಭ್ರಷ್ಟ ನೀತಿಯಿಂದಾಗಿ ಉದ್ಯಮಿಗಳು ಹಾಗೂ ಸಾರ್ವಜನಿಕರು ಪ್ರತಿದಿನ ನರಕಯಾತನೆ ಅನುಭವಿಸುವಂತಾಗಿದೆ.

ಲಂಚ ನೀಡಲು ಇಷ್ಟವಿಲ್ಲದ ನೊಂದ ನಾಗರಿಕರು ಧೈರ್ಯ ಮಾಡಿ ಲೋಕಾಯುಕ್ತ ಪೊಲೀಸರ ಕದ ತಟ್ಟಿದ್ದರಿಂದ ಈ ಮಹಾ ಭ್ರಷ್ಟನ ಅಸಲಿ ಮುಖವಾಡ ಕಳಚಿಬಿದ್ದಿದೆ. ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ಅತ್ಯಂತ ಚಾಣಾಕ್ಷತನದಿಂದ ಕಾರ್ಯಾಚರಣೆಯ ಜಾಲ ಹೆಣೆದಿದ್ದರು. ಅದರಂತೆ ಬಸವೇಶ್ವರನಗರದಲ್ಲಿ ಮುಂಗಡವಾಗಿ ಬರೋಬ್ಬರಿ 15 ಲಕ್ಷ ರೂಪಾಯಿ ಲಂಚದ ಹಣವನ್ನು ಅತ್ಯಂತ ಆಸೆಯಿಂದ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ಆತನ ಮೇಲೆ ಮುಗಿಬಿದ್ದಿದ್ದಾರೆ. ಲಂಚದ ಹಣದ ಸಮೇತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಸವರಾಜ್‌ನ ಅಹಂಕಾರ ಸದ್ಯ ಕಂಬಿಯ ಹಿಂದೆ ಮಣ್ಣುಪಾಲಾಗಿದೆ.
ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಆದರೆ, ಕೇವಲ ಒಬ್ಬ ಅಧಿಕಾರಿಯ ಬಂಧನದಿಂದ ಇಡೀ ವ್ಯವಸ್ಥೆ ಶುದ್ಧಿಯಾಗಲು ಸಾಧ್ಯವಿಲ್ಲ. ಈತನ ಹಿಂದೆ ಇಲಾಖೆಯ ಇನ್ನು ಯಾವೆಲ್ಲಾ ದೊಡ್ಡ ತಲೆಗಳು ಶಾಮೀಲಾಗಿವೆ? ಈ 65 ಲಕ್ಷ ರೂಪಾಯಿ ಲಂಚದ ಪಾಲಿನಲ್ಲಿ ಬೇರೆ ಯಾರಿಗೆಲ್ಲಾ ಹಸ್ತಕ್ಷೇಪವಿದೆ? ಎಂಬ ಸತ್ಯ ಹೊರಬರಬೇಕಿದೆ. ಇಂತಹ ಕಪ್ಪು ಕುರಿಗಳ ವಿರುದ್ಧ ಕೇವಲ ಅಮಾನತು ಶಿಕ್ಷೆಯಷ್ಟೇ ಸಾಲದು, ಇವರ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಠಿಣ ಕಾನೂನು ಜಾರಿಯಾಗಬೇಕಿದೆ.
ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ಕೂತು ಜನರನ್ನು ಪೀಡಿಸುವ ಇಂತಹ ಭ್ರಷ್ಟರಿಗೆ ಈ ಘಟನೆ ಒಂದು ಕಟು ಎಚ್ಚರಿಕೆಯಾಗಬೇಕು. ಕಷ್ಟಪಟ್ಟು ದುಡಿಯುವ ಸಾರ್ವಜನಿಕರನ್ನು ಹೆದರಿಸಿ, ಬೆದರಿಸಿ ಹಣ ಪೀಕುವ ಇಂತಹ ಆಟಗಳು ದೀರ್ಘಕಾಲ ನಡೆಯುವುದಿಲ್ಲ ಎಂಬುದನ್ನು ಲೋಕಾಯುಕ್ತ ಅಧಿಕಾರಿಗಳು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಮಾಜಕ್ಕೆ ಮತ್ತು ಇಲಾಖೆಯ ಇತರ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಸಂದೇಶ ರವಾನೆಯಾಗಬೇಕಿದೆ.


