BBMP
Loading ...

Siddaramaiah

Greater Bengaluru News9 :ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈಗ ಎಲ್ಲರ ಕಣ್ಣು ಬೆಂಗಳೂರಿನ ‘ಕಾವೇರಿ’ ನಿವಾಸದತ್ತ ನೆಟ್ಟಿದೆ. ಸಿಎಂ ಬದಲಾವಣೆ ವದಂತಿಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ನಡುವೆ ನಾಳೆ ಒಂದು ಮಹತ್ವದ ಆತಿಥ್ಯ ಕೂಟ ನಿಗದಿಯಾಗಿದೆ.

ನಾಳೆ (ಮೇ 28) ಮುಂಜಾನೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ವಿಶೇಷ ಉಪಹಾರ ಕೂಟವನ್ನು ಆಯೋಜಿಸಲಾಗಿದೆ. ಈ ಹೈಪ್ರೊಫೈಲ್ ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿಯಾಗಲಿದ್ದಾರೆ. ರಾಜ್ಯ ರಾಜಕೀಯದ ವರ್ತಮಾನದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರ ಮುಖಾಮುಖಿ ತೀವ್ರ ಕುತೂಹಲ ಕೆರಳಿಸಿದೆ.

ಕಳೆದ ಕೆಲವು ದಿನಗಳಿಂದ ಕರ್ನಾಟಕ ಕಾಂಗ್ರೆಸ್ ವಲಯದಲ್ಲಿ ನಾಯಕತ್ವ ಬದಲಾವಣೆಯ ಊಹಾಪೋಹಗಳು ದಟ್ಟವಾಗಿವೆ. ಇಂತಹ ಬಿಗುವಿನ ವಾತಾವರಣದ ನಡುವೆ ಇಬ್ಬರೂ ನಾಯಕರು ಒಟ್ಟಿಗೆ ಕುಳಿತು ಉಪಹಾರ ಸೇವಿಸುತ್ತಾ ಯಾವ ವಿಷಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂಬುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಈ ಸಭೆಯು ಕೇವಲ ಸೌಜನ್ಯದ ಭೇಟಿಯೇ ಅಥವಾ ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯೇ ಎಂಬ ಲೆಕ್ಕಾಚಾರಗಳು ರಾಜಕೀಯ ಪಡಸಾಲೆಯಲ್ಲಿ ಶುರುವಾಗಿವೆ.

ಸಿಎಂ ಬದಲಾವಣೆ ವದಂತಿಗಳಿಗೆ ಬ್ರೇಕ್ ಹಾಕಲು ಈ ಭೇಟಿ ಆಯೋಜಿಸಲಾಗಿದೆಯೇ ಅಥವಾ ಮುಂದಿನ ರಾಜಕೀಯ ತಂತ್ರಗಾರಿಕೆಯ ಭಾಗವೇ ಎಂಬುದು ನಾಳಿನ ಹೈವೋಲ್ಟೇಜ್ ಭೇಟಿಯ ನಂತರವಷ್ಟೇ ಸ್ಪಷ್ಟವಾಗಬೇಕಿದೆ.

Leave a Reply

Your email address will not be published. Required fields are marked *