BBMP
Loading ...

Greater Bengaluru News9: ಕಳೆದ ಏಪ್ರಿಲ್ 29 ರಂದು ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಏಳು ಜನರು ಬಲಿಯಾದ ದಾರುಣ ಘಟನೆಗೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮತ್ತು ಅಂದಿನ ಬಿಬಿಎಂಪಿ (BBMP) ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಎಂದು ತನಿಖಾ ವರದಿ ಬೆಟ್ಟು ಮಾಡಿದೆ.

ಜಿಬಿಎ ಅಧಿಕಾರಿಗಳು ಪಾದಚಾರಿ ಮಾರ್ಗ ಒತ್ತುವರಿಯನ್ನು ತೆರವುಗೊಳಿಸಿದ್ದರೆ ಹಾಗೂ ಬಿಬಿಎಂಪಿ ಶಿಥಿಲಗೊಂಡಿದ್ದ ಕಾಂಪೌಂಡ್ ಗೋಡೆಯನ್ನು ದುರಸ್ತಿ ಮಾಡಿದ್ದರೆ ಈ ಭೀಕರ ದುರಂತವನ್ನು ತಪ್ಪಿಸಬಹುದಿತ್ತು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ (SP) ನೇತೃತ್ವದ ತನಿಖಾ ತಂಡವು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರಿಗೆ ವರದಿ ಸಲ್ಲಿಸಿದೆ.

ಗುರುವಾರ ನಡೆದ ಲೋಕಾಯುಕ್ತ ವಿಚಾರಣೆಯ ಸಂದರ್ಭದಲ್ಲಿ ಈ ವರದಿಯನ್ನು ಮಂಡಿಸಲಾಗಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ತನಿಖಾ ವರದಿಯಲ್ಲಿ ದುರಂತಕ್ಕೆ ಕಾರಣವಾದ ಹಲವು ತಾಂತ್ರಿಕ ಲೋಪಗಳು ಮತ್ತು ಅಧಿಕಾರಿಗಳ ಅಕ್ಷಮ್ಯ ನಿರ್ಲಕ್ಷ್ಯವನ್ನು ಬಹಿರಂಗಪಡಿಸಲಾಗಿದೆ:

ಭಾರತೀಯ ಕಟ್ಟಡ ನಿಯಮಾವಳಿಗಳ (Indian Building Code) ಪ್ರಕಾರ, ಕಾಂಪೌಂಡ್ ಗೋಡೆಯ ಎತ್ತರ 1.5 ರಿಂದ 2.4 ಮೀಟರ್ ಇರಬೇಕು. ಆದರೆ, ಬೌರಿಂಗ್ ಆಸ್ಪತ್ರೆಯ ಗೋಡೆಯು 2.8 ಮೀಟರ್ ಎತ್ತರವಿತ್ತು. ಅಲ್ಲದೆ, ಮಳೆನೀರು ಸರಾಗವಾಗಿ ಹರಿದು ಹೋಗಲು ಯಾವುದೇ ರಂಧ್ರಗಳಾಗಲಿ (weep holes) ಅಥವಾ ಗೋಡೆಗೆ ಭದ್ರತೆ ನೀಡುವ ತಾಂತ್ರಿಕ ರಚನೆಯಾಗಲಿ ಇರಲಿಲ್ಲ.

2008-09ರ ಅವಧಿಯಲ್ಲಿ ಲಾರಿಯೊಂದು ಡಿಕ್ಕಿ ಹೊಡೆದಾಗ ಈ ಕಾಂಪೌಂಡ್ ಗೋಡೆ ಜಖಂಗೊಂಡಿತ್ತು. ಅಷ್ಟೇ ಅಲ್ಲದೆ, 2018-19ರಲ್ಲಿ ಕಟ್ಟಡ ಅವಶೇಷಗಳ ತ್ಯಾಜ್ಯವನ್ನು (Construction Debris) ಅದೇ ಗೋಡೆಯ ಬಳಿ ಸುರಿಯಲಾಗಿತ್ತು. ಆದರೂ ಇದನ್ನು ದುರಸ್ತಿ ಮಾಡುವ ಗೋಜಿಗೆ ಯಾರೂ ಹೋಗಿರಲಿಲ್ಲ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *