ಬೆಂಗಳೂರು: ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷರಾದ ಸುಂದ್ರೇಶ್ ನರ್ಗಲ್ ಅವರು ಇಂದು ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಸಂಘಟನಾತ್ಮಕ ಪ್ರವಾಸ ಹಮ್ಮಿಕೊಂಡಿದ್ದ ಅವರು, ತಮ್ಮ ಕಾರ್ಯಕರ್ತರೊಂದಿಗೆ ಪ್ರಯಾಣ ಬೆಳೆಸುತ್ತಿದ್ದರು. ಈ ವೇಳೆ ನಗರದ ಮಹಾಲಕ್ಷ್ಮಿ ಲೇಔಟ್ ಮುಖ್ಯರಸ್ತೆಯಲ್ಲಿ ಚಲಿಸುತ್ತಿದ್ದ ಅವರ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಇದ್ದಕ್ಕಿದ್ದಂತೆ ಬುಡಸಮೇತ ಉರುಳಿ ಬಿದ್ದಿದೆ.
ಮರ ಬಿದ್ದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದ ಸುಂದ್ರೇಶ್ ನರ್ಗಲ್ ಹಾಗೂ ಚಾಲಕ ಸೇರಿದಂತೆ ಇತರೆ ಪದಾಧಿಕಾರಿಗಳು ಯಾವುದೇ ಪ್ರಾಣಹಾನಿಯಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾರೆ. ಇತ್ತೀಚೆಗೆ ನಗರದಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ ಹಾಗೂ ಬಿರುಗಾಳಿಗೆ ಮರದ ಬೇರುಗಳು ಸಡಿಲಗೊಂಡಿದ್ದೇ ಈ ಘಟನೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಈ ರೋಮಾಂಚನಕಾರಿ ಘಟನೆಯಿಂದ ಪಾರಾದ ಬಳಿಕ ಸಾರ್ವಜನಿಕರು ಮತ್ತು ಶ್ರೀರಾಮ ಸೇನೆಯ ಕಾರ್ಯಕರ್ತರು ದೇವರ ಕೃಪೆಯನ್ನು ಕೊಂಡಾಡಿದ್ದಾರೆ. “ಧರ್ಮೋ ರಕ್ಷತಿ ರಕ್ಷಿತಃ” ಅಂದರೆ ನಾವು ಧರ್ಮವನ್ನು ರಕ್ಷಿಸಿದರೆ, ಆ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂಬುದಕ್ಕೆ ಸುಂದ್ರೇಶ್ ನರ್ಗಲ್ ಅವರು ಈ ಭೀಕರ ಅಪಘಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವುದೇ ಸಾಕ್ಷಿ ಎಂದು ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕವಾಗಿ ಹಂಚಿಕೊಳ್ಳುತ್ತಿದ್ದಾರೆ.


