Greater Bengaluru News9: ನೀವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಾಗಿ ಸಂಚರಿಸುವವರಾಗಿದ್ದರೆ ಈ ಸುದ್ದಿ ನಿಮಗಾಗಿ. ಹೆದ್ದಾರಿ ಬಳಕೆದಾರರಿಗೆ ಕೇಂದ್ರ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ಟೋಲ್ ಪ್ಲಾಜಾಗಳಲ್ಲಿ ಇನ್ನು ಮುಂದೆ ನಗದು ವ್ಯವಹಾರಕ್ಕೆ ಬ್ರೇಕ್ ಬೀಳಲಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಬೂತ್‌ಗಳ ಬಳಿ ವಾಹನಗಳ ದೀರ್ಘ ಸರತಿ ಸಾಲನ್ನು ತಪ್ಪಿಸಲು ಮತ್ತು ಪ್ರಯಾಣವನ್ನು ಸುಗಮಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರಸ್ತೆ ಸಾರಿಗೆ ಸಚಿವಾಲಯ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದರಂತೆ ಏಪ್ರಿಲ್ 10 ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ವ್ಯವಹಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ.
ಈ ಬದಲಾವಣೆಯ ನಂತರ ಹೆದ್ದಾರಿಯಲ್ಲಿ ಟೋಲ್ ಪಾವತಿಯು ಸಂಪೂರ್ಣವಾಗಿ ಡಿಜಿಟಲ್ ಆಗಲಿದೆ. ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಇರುವುದು ಈಗ ಕಡ್ಡಾಯವಾಗಿದೆ. ನಿಮ್ಮ ವಾಹನವು ಟೋಲ್ ಲೇನ್ ಮೂಲಕ ಹಾದುಹೋದಾಗ, ರೇಡಿಯೋ ಫ್ರೀಕ್ವೆನ್ಸಿ ತಂತ್ರಜ್ಞಾನದ ಮೂಲಕ ನೇರವಾಗಿ ನಿಮ್ಮ ಬ್ಯಾಂಕ್ ಖಾತೆ ಅಥವಾ ವಾಲೆಟ್‌ನಿಂದ ಹಣ ಕಡಿತಗೊಳ್ಳುತ್ತದೆ.
ಒಂದು ವೇಳೆ ನಿಮ್ಮ ವಾಹನದಲ್ಲಿ ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ಅಥವಾ ಅದರಲ್ಲಿ ಹಣ ಇಲ್ಲದಿದ್ದರೆ, ನೀವು ಯುಪಿಐ ಮೂಲಕ ಹಣ ಪಾವತಿಸಬಹುದು. ಆದರೆ ಇಲ್ಲೊಂದು ಕಂಡಿಷನ್ ಇದೆ. ಯುಪಿಐ ಮೂಲಕ ಟೋಲ್ ಪಾವತಿಸಿದರೆ ನೀವು ಸಾಮಾನ್ಯ ಟೋಲ್ ದರಕ್ಕಿಂತ 1.25 ಪಟ್ಟು (ಅಂದರೆ ಶೇ. 25 ರಷ್ಟು ಹೆಚ್ಚು) ಹಣವನ್ನು ಪಾವತಿಸಬೇಕಾಗುತ್ತದೆ. ಸರಿಯಾದ ಪಾವತಿ ವ್ಯವಸ್ಥೆ ಇಲ್ಲದ ವಾಹನಗಳಿಗೆ ಹೆದ್ದಾರಿ ಪ್ರವೇಶವನ್ನು ನಿರಾಕರಿಸುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಸರ್ಕಾರವು ಜಿಪಿಎಸ್ (GPS) ಮತ್ತು ಎಎನ್‌ಪಿಆರ್ (ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್) ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಇಲ್ಲಿ ಕ್ಯಾಮೆರಾಗಳು ನಿಮ್ಮ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ, ನೀವು ಚಲಿಸಿದ ದೂರಕ್ಕೆ ತಕ್ಕಂತೆ ಹಣ ಕಡಿತಗೊಳಿಸುತ್ತವೆ. ಇದರಿಂದ ಟೋಲ್ ಗೇಟ್‌ಗಳ ಬಳಿ ವಾಹನ ನಿಲ್ಲಿಸುವ ಅಗತ್ಯವೇ ಇರುವುದಿಲ್ಲ.
ಇನ್ನು ಮುಂದೆ ಟೋಲ್ ಬೂತ್‌ಗಳಲ್ಲಿ ಐಡಿ ಕಾರ್ಡ್ ತೋರಿಸಿ ವಿನಾಯಿತಿ ಪಡೆಯುವಂತಿಲ್ಲ. ರಿಯಾಯಿತಿ ಪಡೆಯುವವರು ಕಡ್ಡಾಯವಾಗಿ ‘Exempted FASTags’ ಹೊಂದಿರಬೇಕು. ಖಾಸಗಿ ಕಾರು ಮಾಲೀಕರು 3,075 ರೂಪಾಯಿಗಳ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ ಪಡೆಯಬಹುದು. ಇದು ದೇಶದ ಸುಮಾರು 200 ಟೋಲ್ ಪ್ಲಾಜಾಗಳಲ್ಲಿ ಮಾನ್ಯವಾಗಿರುತ್ತದೆ.
ಟೋಲ್ ಹಣ ಪಾವತಿಸದೆ ಹೋದರೆ ಅಧಿಕಾರಿಗಳು ಇ-ನೋಟಿಸ್ ಜಾರಿ ಮಾಡಲಿದ್ದಾರೆ. ನೋಟಿಸ್ ಬಂದ ಮೂರು ದಿನಗಳ ಒಳಗೆ ಬಾಕಿ ಹಣ ಪಾವತಿಸದಿದ್ದರೆ, ಟೋಲ್ ಮೊತ್ತದ ಎರಡರಷ್ಟು ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ.


