BBMP
Loading ...

KR Market

Greater Bengaluru News9 : ರಾಜಧಾನಿಯಲ್ಲಿ ಸಾರ್ವಜನಿಕರ ಅನುಕೂಲ ಹಾಗೂ ನಗರದ ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ಹೊಸ ನಿಯಮಗಳನ್ನು ಜಾರಿ ಮುಂದಾಗಿದ್ದಾರೆ. ಬೀದಿಬದಿ ವ್ಯಾಪಾರ ಬಂದ್, ಫ್ಲೆಕ್ಸ್‌ ಹಾಕಿದ್ರೆ 1 ಲಕ್ಷ ರೂ. ದಂಡ; ಟೋಯಿಂಗ್‌ ಆರಂಭಕ್ಕೆ ನಿರ್ಧರಿಸಲಾಗಿದೆ.

ಪಾದಚಾರಿ ಮಾರ್ಗಗಳಲ್ಲಿಸಾರ್ವಜನಿಕರ ಸುರಕ್ಷಿತ ಓಡಾಟಕ್ಕೆ ಅನುವು ಮಾಡಿಕೊಡಲು ಪ್ರತ್ಯೇಕ ನೀತಿ ರೂಪಿಸಲು ತೀರ್ಮಾನಿಸಲಾಗಿದೆ. ಮುಖ್ಯರಸ್ತೆ ಮತ್ತು ಉಪ ಮುಖ್ಯರಸ್ತೆಗಳಲ್ಲಿ ಬೀದಿಬದಿ ವ್ಯಾಪಾರ ನಿರ್ಬಂಧಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಿಳಿಸಿದರು.

ವಿಧಾನಸೌಧದಲ್ಲಿಶುಕ್ರವಾರ ಪಂಚ ಪಾಲಿಕೆಗಳ ಬಜೆಟ್‌ ಸಿದ್ಧತೆ ಮತ್ತು ಜಿಬಿಎ ಕಾರ್ಯಕಾರಿ ಸಭೆ ನಡೆಸಿ ಕೆಲ ಪ್ರಮುಖ ನಿರ್ಣಯಗಳ ಕುರಿತು ನಗರದಲ್ಲಿನ ಎಲ್ಲಪಕ್ಷಗಳ ಶಾಸಕರು, ಸಚಿವರು ಹಾಗೂ ಎಲ್ಲಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

”ಜಿಬಿಎ ಕಾರ್ಯಕಾರಿ ಸಭೆಯಲ್ಲಿಸಚಿವರು, ಶಾಸಕರು, ಪೊಲೀಸ್‌, ಬೆಸ್ಕಾಂ, ಬಿಎಂಆರ್‌ಸಿಎಲ್‌, ಜಲಮಂಡಳಿ, ಬಿಡಿಎ ಅಧಿಕಾರಿಗಳು ಭಾಗವಹಿಸಿದ್ದರು. ಐದೂ ಪಾಲಿಕೆಗಳು ಪ್ರತ್ಯೇಕ ಬಜೆಟ್‌ ಮಂಡಿಸಲು ಸಿದ್ಧತೆ ಮಾಡಿಕೊಂಡಿವೆ. ವಾರ್ಡ್‌ವಾರು ಅನುದಾನ ನೀಡಬೇಕೆಂದು ಶಾಸಕರು ಮನವಿ ಸಲ್ಲಿಸಿದ್ದಾರೆ,” ಎಂದು ಹೇಳಿದರು.

”ಪಾದಚಾರಿ ಮಾರ್ಗ ಸಂಬಂಧ ಹೊಸ ನೀತಿ ತರಲು ತೀರ್ಮಾನಿಸಲಾಗಿದೆ. ನಾಗರಿಕರು ಪಾದಚಾರಿ ಮಾರ್ಗಗಳಲ್ಲಿಸಂಚರಿಸಲು ಪರದಾಡುವಂತಾಗಿದೆ. ಬೀದಿಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ, ಅವರಿಗೆ ಪ್ರತ್ಯೇಕ ಜಾಗ ಕಲ್ಪಿಸಿ, ಜನರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ಬೀದಿಬದಿ ವ್ಯಾಪಾರಕ್ಕೆ ನಿರ್ದಿಷ್ಟ ರಸ್ತೆಗಳನ್ನು ಕಾಯ್ದಿರಿಸಲು ಎಲ್ಲ ಶಾಸಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ,” ಎಂದರು.

”ಹಗಲಿನಲ್ಲಿ ವ್ಯಾಪಾರ ಮಾಡಿದ ಬಳಿಕ ರಾತ್ರಿ ತಳ್ಳು ಗಾಡಿಯನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಇಂಥ ಗಾಡಿಗಳನ್ನು ವಸ್ತುಗಳ ಸಮೇತ ತೆರವುಗೊಳಿಸಲಾಗುವುದು. ಈವರೆಗೆ ನಗರದಲ್ಲಿ60 ಸಾವಿರ ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 30 ಸಾವಿರ ಮಂದಿ ವಾಹನಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಟೆಂಡರ್‌ ಕರೆಯಲಾಗಿದೆ. ಗುರುತಿನ ಚೀಟಿ ಹೊಂದಿದ್ದವರಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಗುರುತಿನ ಚೀಟಿ ಹೊಂದಿಲ್ಲದವರಿಗೆ ಬೀದಿಬದಿಯಲ್ಲಿವ್ಯಾಪಾರ ಮಾಡಲು ಅನುಮತಿ ನೀಡುವುದಿಲ್ಲ,” ಎಂದು ಹೇಳಿದರು.

ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್‌ಗಳನ್ನು ಅಳವಡಿಸುವವರಿಗೆ 50 ಸಾವಿರ ರೂ. ನಿಂದ 1 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಎಚ್ಚರಿಕೆ ನೀಡಿದರು. ”ಜಿಬಿಎ ವ್ಯಾಪ್ತಿಯಲ್ಲಿಫ್ಲೆಕ್ಸ್‌ಗಳ ಹಾವಳಿಗೆ ಕಡಿವಾಣ ಬೀಳುತ್ತಿಲ್ಲ. ಕಾಂಗ್ರೆಸ್‌ ಸೇರಿದಂತೆ ಎಲ್ಲಪಕ್ಷದವರೂ ಫ್ಲೆಕ್ಸ್‌ಗಳನ್ನು ಹಾಕುತ್ತಿದ್ದಾರೆ. ಇನ್ನು ಮುಂದೆ ಹುಟ್ಟುಹಬ್ಬ, ಹಬ್ಬದ ಶುಭಾಶಯ ಕೋರಿ ಫ್ಲೆಕ್ಸ್‌ ಹಾಕುವವರಿಗೆ ಪ್ರತಿ ಫ್ಲೆಕ್ಸ್‌ಗೆ 50 ಸಾವಿರ ರೂ. ನಿಂದ 1 ಲಕ್ಷ ರೂ. ವರೆಗೆ ದಂಡ ಹಾಕಲಾಗುವುದು,” ಎಂದು ಹೇಳಿದರು.

”ಜಾಹೀರಾತು ಪ್ರದರ್ಶನಕ್ಕೆ ನಿರ್ದಿಷ್ಟ ರಸ್ತೆಗಳನ್ನು ಗುರುತಿಸಿ, ಅಂತಹ ಕಡೆ ಪಾಲಿಕೆಗಳಿಂದ ಅನುಮತಿ ಪಡೆದು ಅಳವಡಿಸಿಕೊಳ್ಳಬಹುದು. ಇದರ ಹೊರತಾಗಿ ಅನಧಿಕೃತವಾಗಿ ಫ್ಲೆಕ್ಸ್‌ಗಳನ್ನು ಅಳವಡಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಈ ಸಂಬಂಧ ಪೊಲೀಸ್‌ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ,” ಎಂದರು. ”ಪಾಲಿಕೆ ವ್ಯಾಪ್ತಿಯ ಉದ್ಯಾನಗಳನ್ನು ಯಾವ ಸಮಯದಲ್ಲಿತೆಗೆಯಬೇಕೆಂಬುದರ ಕುರಿತು ಸ್ಥಳೀಯ ಶಾಸಕರ ಜತೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.

ಬೆಂಗಳೂರಿನ ನಿಷೇಧಿತ ರಸ್ತೆಗಳಲ್ಲಿ ನಿಲುಗಡೆ ಮಾಡುವ ವಾಹನಗಳನ್ನೂ ಟೋಯಿಂಗ್‌ ಮಾಡಲಾಗುತ್ತದೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು. ”ಅನಧಿಕೃತ ಪಾರ್ಕಿಂಗ್‌ಗೆ ಕಡಿವಾಣ ಹಾಕಲು ಎಲ್ಲ ಪಾಲಿಕೆಗಳಿಗೆ ತಲಾ ಎರಡು ವಾಹನಗಳನ್ನು ಒದಗಿಸಲಾಗಿದೆ. ನಿಷೇಧಿತ ರಸ್ತೆಗಳಲ್ಲಿ ನಿಲುಗಡೆ ಮಾಡುವ ವಾಹನಗಳನ್ನೂ ಟೋಯಿಂಗ್‌ ಮಾಡಲಾಗುತ್ತದೆ,” ಎಂದು ಹೇಳಿದರು.

”ರಸ್ತೆ ಬದಿಯಲ್ಲಿ ವಾರ, ತಿಂಗಳುಗಳಿಂದ ನಿಲ್ಲಿಸಿರುವ ಹಳೆಯ ವಾಹನಗಳನ್ನು ತೆರವುಗೊಳಿಸಿ, ನಿಗದಿತ ಜಾಗದಲ್ಲಿ ಡಂಪ್‌ ಮಾಡಲಾಗುವುದು. ಈ ಜವಾಬ್ದಾರಿಯನ್ನು ಪೊಲೀಸರಿಗೆ ನೀಡಲಾಗಿದೆ. ವಾಹನಗಳ ಡಂಪಿಂಗ್‌ಗಾಗಿ ಬೆಲ್ಲಹಳ್ಳಿ, ಮಿಟಗಾನಹಳ್ಳಿ, ಸೊಂಡೇಕೊಪ್ಪ, ಗಿಡ್ಡೇನಹಳ್ಳಿಯಲ್ಲಿ ಜಾಗ ಗುರುತಿಸಲಾಗಿದೆ. ಇದಲ್ಲದೆ, ಇನ್ನೂ ಕೆಲ ಜಾಗಗಳನ್ನು ಗುರುತಿಸಿ, ಪೊಲೀಸ್‌ ಇಲಾಖೆಗೆ ನೀಡಲಾಗುವುದು,” ಎಂದರು.

Leave a Reply

Your email address will not be published. Required fields are marked *