Greater Bengaluru News9 : ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳು 42 ಸಾವಿರ ಕೋಟಿ ಸಾಲದಲ್ಲಿವೆ. ಹೆಚ್ಚುವರಿ ವಿದ್ಯುತ್ ಖರೀದಿ ಮತ್ತು ಬಂಡವಾಳ ಕಾಮಗಾರಿಗಳ ನಿರ್ವಹಣೆ ಉದ್ದೇಶದಿಂದ ವಿವಿಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸಾಲ ಪಡೆದುಕೊಳ್ಳಲಾಗಿದೆ.
ಇಂಧನ ಇಲಾಖೆ ನೀಡಿರುವ ಮಾಹಿತಿಪ್ರಕಾರ ಜನವರಿ 2026 ರ ಅಂತ್ಯಕ್ಕೆ ಒಟ್ಟು ದೀರ್ಘಾವಧಿ ಸಾಲದ ಮೊತ್ತ ರೂ. 42,750 ಕೋಟಿಯಾಗಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಫೆಬ್ರವರಿ 2026ರ ಅಂತ್ಯಕ್ಕೆ ದೀರ್ಘಾವಧಿ ಸಾಲ ರೂ.17,556 ಕೋಟಿ ಆಗಿದೆ. ಇನ್ನು ಕೆಪಿಸಿಎಲ್ ಗೆ ಎಸ್ಕಾಂಗಳು ಪಾವತಿಸಬೇಕಾದ ಬಾಕಿ ಮೊತ್ತ 8,755 ಕೋಟಿ ಆಗಿದೆ. ವಿಧಾನಪರಿಷತ್ ಸದಸ್ಯ ಗೋವಿಂದ ರಾಜು ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಇಂಧನ ಇಲಾಖೆ ಉತ್ತರ ನೀಡಿದೆ.
ಯಾಕೆ ಸಾಲ?
ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ಪೂರೈಕೆ ವಿಶ್ವಾಸಾರ್ಹತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ನಿಯಂತ್ರಕ ಚೌಕಟ್ಟಿನ ಅಂತರ್ಗತದಲ್ಲಿ ಕಾರ್ಯನಿರ್ವಹಿಸುತ್ತವೆ. ಇದರ ಪರಿಣಾಮವಾಗಿ, ಬಂಡವಾಳದ ಅಗತ್ಯತೆಗಳನ್ನು ಪೂರೈಸಲು ಹಾಗೂ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಾದ ಬಂಡವಾಳ ವೆಚ್ಚಕ್ಕಾಗಿ ಸಾಲ ಸಂಪನ್ಮೂಲಗಳ ಮೇಲೆ ಅವಲಂಬನೆ ಅನಿವಾರ್ಯವಾಗುತ್ತದೆ ಎಂದು ಇಂಧನ ಇಲಾಖೆ ಸಮರ್ಥಿಸಿಕೊಂಡಿದೆ. ಈ ಆರ್ಥಿಕ ವ್ಯವಸ್ಥೆಯಿಂದ ನಿರಂತರ ಮತ್ತು ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಸಾಧ್ಯವಾಗಿಸುತ್ತದೆ ಎಂದು ಹೇಳಿದೆ.
ಇದೇ ಸಂದರ್ಭದಲ್ಲಿ ವಿವಿಧ ಸರ್ಕಾರಿ ಇಲಾಖೆಗಳಿಂದಲೂ ವಿದ್ಯುತ್ ವಿತರಣಾ ಕಂಪನಿಗಳಿಗೆ ಪಾವತಿ ಬಾಕಿ ಇದೆ. ನಗರಾಭಿವೃದ್ದಿ ಇಲಾಖೆ- 3923.48 ಕೋಟಿ, ಗ್ರಾಮೀಣಾಭವೃದ್ದಿ ಇಲಾಖೆ – 5626.48 ಕೋಟಿ ಬಾಕಿ ಉಳಿಸಿಕೊಂಡಿದೆ. ಅಲ್ಲದೆ, ಇತರೆ ಸರ್ಕಾರಿ ಇಲಾಖೆಗಳು – 2913.94 ಕೋಟಿ ಬಾಕಿ ಉಳಿಸಿಕೊಂಡಿವೆ.
ಹೀಗೆ ಒಟ್ಟು ಬೆಸ್ಕಾಂಗೆ 6211.14 ಕೋಟಿ, ಸೆಸ್ಕಾಂಗೆ 1233.55 ಕೋಟಿ, ಮೆಸ್ಕಾಂಗೆ 767.88 ಕೋಟಿ, ಜೆಸ್ಕಾಂಗೆ 2201.73 ಕೋಟಿ ಸೇರಿದಂತೆ ಜನವರಿ 31, 2026 ರ ಅಂತ್ಯಕ್ಕೆ ಒಟ್ಟು 12463 ಕೋಟಿ ಮೊತ್ತ ಪಾವತಿಗೆ ಬಾಕಿ ಉಳಿಸಿಕೊಂಡಿವೆ.
ವಸೂಲಿಗೆ ಕ್ರಮ ಏನು?
ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯ ನಗರಾಭಿವೃದ್ಧಿ ಇಲಾಖೆ, ಸ್ಥಳೀಯ ಸಂಸ್ಥೆಗಳು ಹಾಗೂ ಸರ್ಕಾರಿ ಸಂಸ್ಥೆಗಳಿಂದ ಬರಬೇಕಾದ ವಿದ್ಯುತ್ ಶುಲ್ಕ ಬಾಕಿಗೆ ಸಂಬಂದಿಸಿದಂತೆ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇಂಧನ ಇಲಾಖೆಯಿಂದ ತ್ರೈಮಾಸಿಕವಾಗಿ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರೊಂದಿಗೆ ನಿಯಮಿತವಾಗಿ ಪತ್ರ / ಅರೆ ಸರ್ಕಾರಿ ಪತ್ರ ಮುಖಾಂತರ ವಿದ್ಯುತ್ ಬಾಕಿ ಮೊತ್ತವನ್ನು ಪಾವತಿಸಲು ಕೋರಲಾಗಿರುತ್ತದೆ. ವಿದ್ಯುತ್ ಸರಬರಾಜು ಕಂಪನಿಗಳು ಸರ್ಕಾರಿ ಇಲಾಖೆಯ ಸ್ಥಳೀಯ ಕಛೇರಿಗೆ ಭೇಟಿ ನೀಡಿ ವಿದ್ಯುತ್ ಬಾಕಿ ಶುಲ್ಕವನ್ನು ಪಾವತಿಸುವಂತ ವಿಭಾಗೀಯ ಮತ್ತು ಉಪ ವಿಭಾಗೀಯ ಕಛೇರಿಗಳ ಅಧಿಕಾರಿಗಳ ಮೂಲಕ ಕೋರಲಾಗುತ್ತಿದೆ.
ವಿದ್ಯುತ್ ಸರಬರಾಜು ಕಂಪನಿಗಳು ಕಛೇರಿಯಲ್ಲಿ ಪ್ರತಿ ವಾರವು ಜರುಗುವ ಕಂದಾಯ ಪರಿಶೀಲನಾ ಸಭೆಗಳಲ್ಲಿ ಸರ್ಕಾರಿ ಸ್ಥಾವರಗಳ ವಿದ್ಯುತ್ ಬಾಕಿ ಇಲಾಖಾವಾರು ಪರಿಶೀಲಿಸಿ ಎಲ್ಲಾ ವಲಯ/ ವೃತ್ತ/ವಿಭಾಗಾಧಿಕಾರಿಗಳಿಗೆ ವಸೂಲಾತಿಯನ್ನು ತೀವುಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿರುತ್ತದೆ ಎಂದು ಇಂಧನ ಇಲಾಖೆ ತಿಳಿಸಿದೆ.


