ನವದೆಹಲಿ: ಹೊಸ ಹಣಕಾಸು ವರ್ಷದ ಆರಂಭದಲ್ಲೇ ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಲಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು ಫಾಸ್ಟ್‌ಟ್ಯಾಗ್ ( FASTag ) ವಾರ್ಷಿಕ ಪಾಸ್ ದರದಲ್ಲಿ ಭಾರಿ ಏರಿಕೆ ಮಾಡಿದೆ. 2026, ಏಪ್ರಿಲ್ 1ರ ಹೊಸ ಹಣಕಾಸು ವರ್ಷದಿಂದಲೇ ಈ ದರ ಜಾರಿಗೆ ಬರಲಿದೆ.
ಹೌದು, ವಾರ್ಷಿಕ ಪಾಸ್ ದರವು 3,000 ರೂ.ಗಳಿಂದ 3,075 ರೂ.ಗಳಿಗೆ ಏರಿಕೆಯಾಗಲಿದೆ ಎಂದು ಎನ್ಎಚ್ಎಐ ಇಂದು (ಮಾರ್ಚ್ 15) ಘೋಷಿಸಿದೆ. ಈ ಬೆಲೆಯು ಹಣದುಬ್ಬರದ ಹೊಂದಾಣಿಕೆಗಳಿಗೆ ಸಂಬಂಧಿಸಿದಂತೆ ಶೇ. 2.5 ರಷ್ಟು ಹೆಚ್ಚಳವಾಗಿದೆ.
ಅಂದಹಾಗೆ, ಈ ಫಾಸ್ಟ್ ಟ್ಯಾಗ್ ಪಾಸ್ ಅನ್ನು ಖಾಸಗಿ ವಾಹನಗಳ ಮಾಲೀಕರಿಗಾಗಿ (ಅಂದರೆ ಕಾರು, ಜೀಪ್, ವ್ಯಾನ್ ಮುಂತಾದವುಗಳ ಮಾಲೀಕರಿಗಾಗಿ) ವಿನ್ಯಾಸಗೊಳಿಸಲಾಗಿದೆ. ಯಾರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪದೇಪದೆ ಪ್ರಯಾಣ ಮಾಡುತ್ತಾರೋ ಅವರಿಗೆ ಈ ಪಾಸ್ ನೀಡಲಾಗುತ್ತಿದೆ. ಈ ಪಾಸ್ ಇದ್ದರೆ, 200 ಬಾರಿ ಟೋಲ್ ಗೇಟ್‌ಗಳ ಮೂಲಕ ಹೋಗಬಹುದು ಅಥವಾ ಒಂದು ವರ್ಷದವರೆಗೆ ಇದನ್ನು ಬಳಸಬಹುದು. ಒಂದು ವೇಳೆ ವರ್ಷ ತುಂಬುವ ಮೊದಲೇ 200 ಬಾರಿ ಟೋಲ್ ಮೂಲಕ ಹಾದು ಹೋದರೆ, ಅಲ್ಲಿಗೆ ಪಾಸ್ ಅವಧಿ ಮುಗಿಯುತ್ತದೆ.
ಹಣ ಉಳಿತಾಯ
ಇನ್ನು ದರ ಏರಿಕೆ ಮಾಡಿದರು ಕೂಡ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್, ನಿಯಮಿತ ಹೆದ್ದಾರಿ ವಾಹನ ಸವಾರರಿಗೆ ಹಣ ಉಳಿತಾಯ ಮಾಡುತ್ತದೆ. ಅಲ್ಲದೆ, ಟೋಲ್ ಪಾವತಿಗಳನ್ನು ತ್ವರಿತವಾಗಿ ಮತ್ತು ನಗದುರಹಿತವಾಗಿ ಇರಿಸುತ್ತದೆ.
ಏನಿದು ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್?
ಈ ಪಾಸ್ ಖಾಸಗಿ ವಾಹನಗಳ ಮಾಲೀಕರಿಗಾಗಿ (ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳು) ವಿಶೇಷವಾಗಿ ರಚಿಸಲಾಗಿದೆ. ರಾಷ್ಟ್ರೀಯ ಹೈವೇಗಳಲ್ಲಿ (ನ್ಯಾಷನಲ್ ಹೈವೇಗಳಲ್ಲಿ) ಪದೇಪದೆ ಪ್ರಯಾಣ ಮಾಡುವವರಿಗೆ ಇದು ತುಂಬಾ ಉಪಯುಕ್ತವಾಗಿದೆ. ಪ್ರತಿ ಬಾರಿ ಟೋಲ್ ಪಾವತಿಸುವ ಬದಲು, ಒಂದು ವರ್ಷದ ಪಾಸ್ ಖರೀದಿಸಿ, ಅದರಲ್ಲಿ ನಿಗದಿತ ಮಿತಿಯೊಳಗೆ ಅನೇಕ ಬಾರಿ ಹೆದ್ದಾರಿಯನ್ನು ದಾಟಬಹುದು.
ಮಿತಿ: ಗರಿಷ್ಠ 200 ಟೋಲ್ ಟ್ರಿಪ್‌ಗಳು (ಅಂದರೆ 200 ಬಾರಿ ಟೋಲ್ ಪ್ಲಾಜಾ ದಾಟುವುದು) ಅಥವಾ ಒಂದು ವರ್ಷದ ಬಳಕೆ. ಇವುಗಳಲ್ಲಿ ಯಾವುದು ಮೊದಲು ಮುಗಿಯುತ್ತದೋ ಅಲ್ಲಿಗೆ ಪಾಸ್ ಅವಧಿ ಕೊನೆಗೊಳ್ಳುತ್ತದೆ.
ಲಾಭ: ಪದೇ ಪದೇ ಹೋಗುವವರಿಗೆ ಸಾಮಾನ್ಯ ಟೋಲ್ ದರಗಳಿಗಿಂತ ಒಟ್ಟು ಖರ್ಚು ಗಣನೀಯವಾಗಿ ಕಡಿಮೆಯಾಗುತ್ತದೆ.


