BBMP
Loading ...

BESCOM

Greater Bengaluru News9: ಗೃಹ ಬಳಕೆ ಉದ್ದೇಶದಿಂದ ಸಂಪರ್ಕ ಪಡೆದ ವಿದ್ಯುತ್‌ ಅನ್ನು ವಾಣಿಜ್ಯ ಹಾಗೂ ಬೇರೆ ಉದ್ದೇಶಗಳಿಗೆ ಬಳಸಬಾರದು ಎಂದು ಬೆಸ್ಕಾಂ ತನ್ನ ಗ್ರಾಹಕರಿಗೆ ಮನವಿ ಮಾಡಿದೆ. ಒಂದು ವೇಳೆ ಅನ್ಯ ಉದ್ದೇಶಗಳಿಗೆ ಬಳಸಿದ್ದೇ ಆಗಿದ್ದಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಬೆಸ್ಕಾಂ ಎಚ್ಚರಿಕೆ ನೀಡಿದೆ.

ಗೃಹ ಬಳಕೆಗೆ ಪಡೆದ (ಎಲ್‌ಟಿ 1) ವಿದ್ಯುತ್‌ ಸಂಪರ್ಕವನ್ನು ಕೆಲವು ಗ್ರಾಹಕರು ಅಂಗಡಿ-ಮುಂಗಟ್ಟು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಅತಿಥಿ ಗೃಹಗಳು, ಮೆಸ್‌, ಸರ್ವೀಸ್ ಅಪಾರ್ಟ್‌ ಮೆಂಟ್‌, ಪೇಯಿಂಗ್‌ ಗೆಸ್ಟ್‌, ಕಚೇರಿ ಮುಂತಾದ ಉದ್ದೇಶಗಳಿಗೆ (ಎಲ್‌ಟಿ 1 ಸಂಪರ್ಕ) ಅನಧಿಕೃತವಾಗಿ ಬಳಸುತ್ತಿರುವುದು ಬೆಸ್ಕಾಂ ಗಮನಕ್ಕೆ ಬಂದಿದೆ.

ಈ ರೀತಿಯಲ್ಲಿ ಬಳಸಿಕೊಳ್ಳುತ್ತಿರುವವರು ಕೂಡಲೇ ಇಂತಹ ಸಂಪರ್ಕಗಳನ್ನು ತಕ್ಷಣವೇ ಕಡಿತಗೊಳಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಜರಗಿಸಲಾಗುವುದು ಎಂದು ಬೆಸ್ಕಾಂ ಎಚ್ಚರಿಕೆ ನೀಡಿದೆ.

ಗೃಹ ಬಳಕೆಯ ಉದ್ದೇಶಕ್ಕೆ ಪಡೆದ ವಿದ್ಯುತ್‌ ಸಂಪರ್ಕವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವ ಗ್ರಾಹಕರು, ತಕ್ಷಣವೇ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಭೇಟಿ ನೀಡಿ ಸಮರ್ಪಕ ವಿದ್ಯುತ್‌ ದರ ವರ್ಗದ (tariff category) ಬದಲಾವಣೆಗೆ ಅರ್ಜಿ ಸಲ್ಲಿಸಿ ಸಂಪರ್ಕವನ್ನು ನಿಯಮಾನುಸಾರ ಪಡೆಯುವಂತೆಯೂ ಬೆಸ್ಕಾಂ ವಿನಂತಿಸಿದೆ.

ಉತ್ಸವ, ಹಬ್ಬ, ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಕೂಡ ಗೃಹ ಬಳಕೆಯ ವಿದ್ಯುತ್‌ ಸಂಪರ್ಕವನ್ನು ಬಳಸಿಕೊಳ್ಳದೆ, ಸಂಬಂಧಿತ ಉಪ ವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಿ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆಯಲು ಬೆಸ್ಕಾಂ ಗ್ರಾಹಕರಿಗೆ ಮನವಿ ಮಾಡಿದೆ.

ಗೃಹ ಬಳಕೆಯ ವಿದ್ಯುತ್‌ ಸಂಪರ್ಕವನ್ನು ಅನ್ಯ ಉದ್ದೇಶಗಳಿಗೆ ಬಳಸುವವರ ವಿರುದ್ಧ ವಿದ್ಯುತ್ ಅಧಿನಿಯಮ, 2003ರ ಕಲಂ 126 ಮತ್ತು 135 ಹಾಗೂ ವಿದ್ಯುತ್ ಸರಬರಾಜು ನಿಯಮಗಳ ಕಲಂ 42 ಮತ್ತು ಅದರ ಉಪಕಲಂಗಳ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಸ್ಕಾಂ ಎಚ್ಚರಿಸಿದೆ.
ಅಪಾರ್ಟ್ ಮೆಂಟ್ ಗಳಲ್ಲಿ ಸೂರ್ಯಘರ್ ಯೋಜನೆ
ಬೆಂಗಳೂರು ನಗರದಲ್ಲಿನ ಅಪಾರ್ಟ್ ಮೆಂಟ್ ನಿವಾಸಿಗಳು ಪಿಎಮ್ ಸೂರ್ಯಘರ್ ಯೋಜನೆಯಡಿಯಲ್ಲಿ ಮೇಲ್ಘಾವಣಿಯಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಜತೆ ಕೈಜೋಡಿಸಬೇಕು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶ ಎನ್ ಶಿವಶಂಕರ್ ತಿಳಿಸಿದ್ದಾರೆ.


ಬೇಸ್ಕಾಂ ಕ್ಷೇತ್ರಾಧಿಕಾರಿಗಳು ಮುಂದಿನ ದಿನಗಳಲ್ಲಿ ಅಪಾರ್ಟ್ ಮೆಂಟ್ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಿ ಯೋಜನೆ ಅನುಷ್ಠಾನಕ್ಕೆ ಅವರ ಮನವೊಲಿಸಲಿದ್ದಾರೆ. ಗ್ರಾಹಕರು ಮೇಲ್ಘಾವಣಿ ಸೌರ ಘಟಕ ಅಳವಡಿಸಿಕೊಳ್ಳಲು ಅಗತ್ಯ ಸಹಾಯ ನೀಡಲು ಬೆಸ್ಕಾಂ ಸದಾ ಸಿದ್ದವಿದೆ ಎಂದು ತಿಳಿಸಿದ್ದಾರೆ.


ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ದೊರೆಯುವ ಆರ್ಥಿಕ ಸಹಾಯ ರಾಷ್ಟ್ರೀಯ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ, ವಿದ್ಯುತ್ ಬಿಲ್ ಉಳಿತಾಯ, ಪರಿಸರ ಸಂರಕ್ಷಣೆಗೆ ಕೊಡುವ ಕೊಡುಗೆ ಮುಂತಾದ ಮಾಹಿತಿಗಳನ್ನು ಈ ಸಂದರ್ಭದಲ್ಲಿ ಒದಗಿಸಲಾಗುವುದು. ಇದರಿಂದ ಲಿಫ್ಟ್, ನೀರಿನ ಪಂಪ್ ಬಿಲ್, ಬೆಳಕು ಮುಂತಾದ ವಿದ್ಯುತ್ ಬಳಕೆ ಮಾಡಿದರೆ ವಿದ್ಯುತ್ ಬಿಲ್ ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಅವರು ವಿವರಿಸಿದ್ದಾರೆ.


ಇದುವರೆಗೂ 137 ಅರ್ಜಿಗಳು ಬಂದಿದ್ದು, ಇದರಿಂದ 4,87 ಮೆಗಾ ವ್ಯಾಟ್ ಸಾಮರ್ಥದ ಮೇಲ್ಘಾವಣಿ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದರಿಂದ ಅಪಾರ್ಟ್ ಮೆಂಟ್ ವಾಸಿಗಳಿಗೆ ಮಾಸಿಕ ಖರ್ಚು ಕಡಿಮೆಯಾಗಲಿದೆ. ಹೆಚ್ಚೆಚ್ಚು ಅಪಾರ್ಟ್ಮೆಂಟ್ ನಿವಾಸಿಗಳು ಈ ಯೋಜನೆಯನ್ನು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದರಿಂದ ವಿದ್ಯುತ್ ಅವಲಂಬನೆಯು ಕಡಿಮೆಯಾಗಲಿದೆ ಎಂದರು.

Leave a Reply

Your email address will not be published. Required fields are marked *