BBMP
Loading ...

Team-India-91-2026-03-670943fdd8c9fe1666b97fb908a0ad58-1200x675

ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೈನವಿರೇಳಿಸುವ ಸಂಭ್ರಮ.. ಅಹಮದಾಬಾದ್‌ನ ಆಕಾಶದಲ್ಲಿ ಬಣ್ಣಬಣ್ಣದ ಪಟಾಕಿಗಳ ಚಿತ್ತಾರ.. ಗ್ಯಾಲರಿಯಲ್ಲಿ ಲಕ್ಷಾಂತರ ಅಭಿಮಾನಿಗಳ ಕೇಕೆ-ಚಪ್ಪಾಳೆಯ ಝೇಂಕಾರ! ಹೌದು, ಕ್ರಿಕೆಟ್ ಕಾಶಿ ಭಾರತದಲ್ಲಿ ಇಂದು ನವ ಇತಿಹಾಸ ಸೃಷ್ಟಿಯಾಗಿದೆ. ನ್ಯೂಜಿಲೆಂಡ್ ತಂಡವನ್ನು ಫೈನಲ್‌ನಲ್ಲಿ ಮಣಿಸಿದ ಟೀಮ್ ಇಂಡಿಯಾ, ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕುವ ಮೂಲಕ ‘ವಿಶ್ವ ಚಾಂಪಿಯನ್’ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಬ್ಯಾಟಿಂಗ್ ಅಬ್ಬರ: ಬೌಂಡರಿ-ಸಿಕ್ಸರ್‌ಗಳ ಸುರಿಮಳೆ!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಸವಾಲು ಸ್ವೀಕರಿಸಿದ ಭಾರತಕ್ಕೆ ಆರಂಭದಲ್ಲೇ ಸಿಕ್ಕಿದ್ದು ಸಿಡಿಲಬ್ಬರದ ಆರಂಭ. ಟೀಕೆಗಳಿಗೆ ಗುರಿಯಾಗಿದ್ದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಇಂದು ಫಿನಿಕ್ಸ್‌ನಂತೆ ಎದ್ದು ಬಂದರು. ಕೇವಲ 21 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಸಹಿತ 51 ರನ್ ಚಚ್ಚಿದ ಅಭಿಷೇಕ್, 247ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಕಿವೀಸ್ ಬೌಲರ್‌ಗಳನ್ನು ಕಂಗೆಡಿಸಿದರು.

ಅಭಿಷೇಕ್ ಹಾದಿಯಲ್ಲೇ ಸಾಗಿದ ಸಂಜು ಸ್ಯಾಮ್ಸನ್ ಇಡೀ ಕ್ರೀಡಾಂಗಣಕ್ಕೆ ರಸದೌತಣ ನೀಡಿದರು. ಕಿವೀಸ್ ಪಡೆಯ ಬೌಲಿಂಗ್ ಅನ್ನು ಚಿಂದಿ ಉಡಾಯಿಸಿದ ಸಂಜು, 8 ಅಮೋಘ ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 89 ರನ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಇವರಿಗೆ ಸಾಥ್ ನೀಡಿದ ಇಶಾನ್ ಕಿಶನ್ ಕೂಡ 216ರ ಸ್ಟ್ರೈಕ್ ರೇಟ್‌ನಲ್ಲಿ 54 ರನ್ (4 ಸಿಕ್ಸರ್, 4 ಬೌಂಡರಿ) ಚಚ್ಚಿದರು.

ಶಿವಂ ದುಬೆ ಮಿಂಚಿನ ಫಿನಿಶಿಂಗ್!
ನಾಯಕ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರೂ, ಅಂತಿಮ ಹಂತದಲ್ಲಿ ಶಿವಂ ದುಬೆ ಅಕ್ಷರಶಃ ಅಬ್ಬರಿಸಿದರು. ಕೇವಲ 8 ಎಸೆತಗಳನ್ನು ಎದುರಿಸಿದ ದುಬೆ 325ರ ಸ್ಟ್ರೈಕ್ ರೇಟ್‌ನಲ್ಲಿ 26 ರನ್ (2 ಸಿಕ್ಸರ್, 3 ಬೌಂಡರಿ) ಸಿಡಿಸಿ ಭಾರತದ ಮೊತ್ತವನ್ನು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್‌ಗಳ ಬೃಹತ್ ಶಿಖರಕ್ಕೆ ತಲುಪಿಸಿದರು.

ಬೂಮ್ರಾ ಚಾಂಪಿಯನ್‌ ಬೌಲಿಂಗ್
256 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಭಾರತದ ಬೌಲರ್‌ಗಳು ಸಿಡಿಲು ಬಡಿದಂತೆ ಕಾಡಿದರು. ಜಸ್ಪ್ರೀತ್ ಬುಮ್ರಾ, ಅರ್ಷದೀಪ್‌ ಸಿಂಗ್ ಅವರ ಮಾರಕ ವೇಗ, ಅಕ್ಷರ್ ಪಟೇಲ್ ಅವರ ಚಾಣಾಕ್ಷ ಸ್ಪಿನ್ ಮತ್ತು ವರುಣ್ ಚಕ್ರವರ್ತಿ ಅವರ ಗೂಗ್ಲಿಗಳಿಗೆ ಕಿವೀಸ್ ಬ್ಯಾಟರ್‌ಗಳು ವಿಲವಿಲ ಅಂತಾ ಒದ್ದಾಡಿದರು.‌ ಜಸ್‌ಪ್ರಿತ್‌ ಬುಮ್ರಾ‌ ಬರೋಬ್ಬರಿ 4 ವಿಕೆಟ್ ಕಬಳಿಸಿ ಎದುರಾಳಿಯ ಬೆನ್ನೆಲುಬು ಮುರಿದರು. ವಿಶೇಷ ಅಂದ್ರೆ ನಾಲ್ಕು ಓವರ್‌ನಲ್ಲಿ ಬುಮ್ರಾ ಕೇವಲ 15 ರನ್‌ಗಳನ್ನ ಮಾತ್ರ ನೀಡಿದರು. ಅಕ್ಸರ್‌ ಪಟೇಲ್‌ ಮೂರು ವಿಕೆಟ್‌ ಪಡೆದರು. ಇನ್ನು, ವರುಣ್ ಚಕ್ರವರ್ತಿ, ಅಭಿಷೇಕ್‌ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದು ಸಾಂಘಿಕ ಪ್ರದರ್ಶನ ನೀಡಿದರು. ಒತ್ತಡಕ್ಕೆ ಮಣಿದ ನ್ಯೂಜಿಲೆಂಡ್ ನಿಗದಿತ 19 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 159 ರನ್‌ಗಳಿಸಿ ಸೋಲಿಗೆ ಶರಣಾಯಿತು. ಆ ಮೂಲಕ ಟೀಂ ಇಂಡಿಯಾ 96 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್‌ ಆಯಿತು.

ಪಂದ್ಯ ಮುಗಿಯುತ್ತಿದ್ದಂತೆಯೇ ಇಡೀ ಮೈದಾನಕ್ಕೆ ಆಟಗಾರರು ಮತ್ತು ತಂಡದ ಮ್ಯಾನೇಜ್ಮೆಂಟ್ ನುಗ್ಗಿ ಕುಣಿದು ಕುಪ್ಪಳಿಸಿದರು. ಭಾರತೀಯ ಆಟಗಾರರು ಪರಸ್ಪರ ಅಪ್ಪಿಕೊಂಡು ಕಣ್ಣೀರು ಹಾಕುತ್ತಾ ಗೆಲುವಿನ ಸಂಭ್ರಮ ಆಚರಿಸಿದರು. ಇತ್ತ ಭಾರತದಾದ್ಯಂತ ಬೀದಿ ಬೀದಿಗಳಲ್ಲಿ ಜನರು ಪಟಾಕಿ ಹೊಡೆದು, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಸತತ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ವಿಶ್ವದ ಮೊದಲ ತಂಡಗಳ ಸಾಲಿಗೆ ಭಾರತ ಸೇರ್ಪಡೆಯಾಗಿದ್ದು, ಟೀಮ್ ಇಂಡಿಯಾದ ಈ ‘ಜೈತ್ರಯಾತ್ರೆ’ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಿದೆ.

ಆ ಮೂಲಕ ಟೀಂ ಇಂಡಿಯಾ ಮೂರು ಟಿ-20 ವಿಶ್ವಚಾಂಪಿಯ್‌ ಆದಂತೆ ಆಗಿದೆ. ಆ ಮೂಲಕ ಟೀಂ ಇಂಡಿಯಾ ಮೂರು ಟಿ-20 ವಿಶ್ವಚಾಂಪಿಯ್‌ ಆದಂತೆ ಆಗಿದೆ. ಟಿ20 ಇತಿಹಾಸದಲ್ಲಿ ಮೂರು ಬಾರಿ ಚಾಂಪಿಯನ್‌ ಆದ ಏಕೈಕ ತಂಡವಾಗಿ ಭಾರತ ಹೊರಹೊಮ್ಮಿದೆ.

Leave a Reply

Your email address will not be published. Required fields are marked *