BBMP
Loading ...

DKS

Greater Bengaluru News9 : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 30 ಸಾವಿರ ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಸಿಕೊಂಡಿದ್ದು, ಮುಂದಿನ 2 ತಿಂಗಳ ಒಳಗೆ ಅರ್ಹರಿಗೆ ಗುರುತಿನ ಚೀಟಿ ಹಾಗೂ ವಾಹನ ವಿತರಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೀದಿಬದಿ ವ್ಯಾಪಾರಿಗಳಿಗೆ ಕಲ್ಯಾಣ ಯೋಜನೆಗಳಡಿ ತಳ್ಳುವಗಾಡಿ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ನೀಡಲಾಗುವುದು. ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗದ ಬದಲು ವಾಹನಗಳಲ್ಲಿ ವ್ಯಾಪಾರ ಮಾಡಲು ಸರಕಾರ ನೆರವಾಗುತ್ತದೆ ಎಂದರು.

ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ ಭೂ ಸಂತ್ರಸ್ತರಿಗೆ ಪರಿಹಾರ ರೂಪವಾಗಿ ಕೆಲವು ಕಡೆ ಜಿಬಿಎ ವತಿಯಿಂದ ಟಿಡಿಆರ್ ನೀಡಬೇಕಾಗಿದೆ. ಪಾಲಿಕೆ ವತಿಯಿಂದ ಒಂದು ಕೇಂದ್ರ ಆರಂಭಿಸಿ ಸಂತ್ರಸ್ತರು ಅರ್ಜಿ ಕೊಟ್ಟ ಬಳಿಕ ಕೂಡಲೇ ಸ್ಥಳ ಪರಿಶೀಲನೆ ಮಾಡಿ ಎರಡು ಮೂರು ದಿನಗಳಲ್ಲಿ ಟಿಡಿಆರ್ ನೀಡಲು ತೀರ್ಮಾನಿಸಲಾಗಿದೆ. ಟಿಡಿಆರ್ ವಿನಿಮಯ ಬಗ್ಗೆ ಮುಂದಿನ ಎರಡು ವಾರದಲ್ಲಿ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಜಿಬಿಎ ಚಿಹ್ನೆಯನ್ನು ಅಂತಿಮಗೊಳಿಸಲಾಗಿದ್ದು, ಆಯುಕ್ತರು ಅದನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಪಾಲಿಕೆಯಲ್ಲಿ ಮಾದರಿ ಕಟ್ಟಡ ಅಂತಿಮಗೊಳಿಸಿದ್ದೇವೆ. ಆದಷ್ಟು ಬೇಗ ಟೆಂಡರ್ ಕರೆದು ಗುದ್ದಲಿ ಪೂಜೆ ಮಾಡಿ ಕೆಲಸ ಆರಂಭಿಸಬೇಕು ಎಂದು ಸೂಚಿಸಿದ್ದೇನೆ. ಪ್ರತಿನಿತ್ಯ ಕಾಮಗಾರಿ ಪ್ರಗತಿ ಫೋಟೋ ಸಮೇತ ಮಾಹಿತಿ ರವಾನಿಸಬೇಕು ಎಂದು ಸೂಚಿಸಿದ್ದು, ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಿದ್ದೇನೆ ಎಂದು ಅವರು ಹೇಳಿದರು.

10 ಲಕ್ಷ ಆಸ್ತಿಗಳ ಸ್ಕ್ಯಾನಿಂಗ್ ಪೂರ್ಣ: ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಆಸ್ತಿಗಳನ್ನು ಸ್ಕ್ಯಾನ್ ಮಾಡಿಸಿದ್ದು, ಎಪ್ರಿಲ್ ತಿಂಗಳ ಮೂರನೇ ರವಿವಾರದಂದು ಕಾರ್ಯಕ್ರಮವನ್ನು ಆಯೋಜಿಸಿ ಅವರಿಗೆ ಇ ಖಾತಾ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಬೆಂಗಳೂರು ನಗರದಲ್ಲಿ ಬಿ ಯಿಂದ ಎ ಖಾತಾ ಪರಿವರ್ತನೆ ಆರಂಭವಾಗಿದೆ. ಅವರ ಆಸ್ತಿಗಳನ್ನು ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಖಾತಾ ಪರಿವರ್ತನೆ ಮಾಡಲಾಗುವುದು. ಎಲ್ಲಾ ಕಂದಾಯ ಜಾಗದಲ್ಲಿ ಮಾಡಲಾಗಿರುವ ಬಡಾವಣೆ ರಸ್ತೆಗಳನ್ನು ಪಾಲಿಕೆ ರಸ್ತೆಗಳನ್ನಾಗಿ ಮಾಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಕಸ ವಿಲೇವಾರಿಗೆ ಜಮೀನು ಖರೀದಿ ಮಾಡಲು ತೀರ್ಮಾನ: ಇನ್ನು ಕಸ ವಿಲೇವಾರಿಗೆ ನಗರದ 40 ಕಿ.ಮೀ ಒಳಗೆ ಗುಡ್ಡ ಪ್ರದೇಶದ ಅಕ್ಕಪಕ್ಕ 100 ಎಕರೆ ಭೂಮಿ ಸಿಕ್ಕರೆ, ಅದನ್ನು ಒಪ್ಪಿತ ಆಧಾರದ ಮೇಲೆ ಖರೀದಿ ಮಾಡಿ ಸ್ವಾಧೀನಪಡಿಸಿಕೊಳ್ಳಲು ಸಿದ್ಧವಿದ್ದೇವೆ. ಈ ಬಗ್ಗೆಯೂ ನಾವು ತೀರ್ಮಾನ ಮಾಡಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದೇವೆ. ಭೂ ಮಾಲಕರು, ರೈತರು, ವ್ಯಾಪಾರಿಗಳು ಮುಂದೆ ಬಂದು ಜಮೀನು ನೀಡಬಹುದು ಇದಕ್ಕೆ ನಾವು ಪ್ರತ್ಯೇಕ ರಸ್ತೆ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *