BBMP
Loading ...

CS Shalini

Greater Bengaluru News9 : ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇದೀಗ ಉಲ್ಟಾ ಹೊಡೆದಿದ್ದಾರೆ. ಭ್ರಷ್ಟಾಚಾರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರಿಂದ ತೀವ್ರ ವಿಚಾರಣೆ ಎದುರಿಸಿ ಹೊರಬಂದ ಬಳಿಕ ಮಾತನಾಡಿರುವ ಅವರು, ಶಾಲಿನಿ ರಜನೀಶ್ ವಿರುದ್ಧದ ಆರೋಪ ಸುಳ್ಳು ಎಂದಿದ್ದಾರೆ. ಅಲ್ಲದೇ ಅವರಿಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ 1.60 ಕೋಟಿ ರೂ. ಲಂಚದ ಆರೋಪವನ್ನು ಸ್ನೇಹಮಯಿ ಕೃಷ್ಣ ಮಾಡಿದ್ದರು. ಮುಡಾ ಮಾಜಿ ಆಯುಕ್ತ ನಟೇಶ್ ಮುಖ್ಯ ಕಾರ್ಯದರ್ಶಿಗೆ ಲಂಚ ಕೊಟ್ಟು ಮುಂಬಡ್ತಿ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು. ಆದರೆ, ಇದಕ್ಕೆ ಸಂಬಂಧಿಸಿ ನಟೇಶ್ ನೀಡಿದ ದೂರಿನ ಅನ್ವಯ ಸ್ನೇಹಮಯಿ ಕೃಷ್ಣ ಬಂಧನವಾಗಿತ್ತು.

ಸಿಸಿಬಿ ವಿಚಾರಣೆ ಬಳಿಕ ಮಾತನಾಡಿರುವ ಅವರು, ನಟೇಶ್‌ ಅವರಿಗೆ ಸಂಬಂಧಿಸಿ ಬಿಡುಗಡೆಯಾಗಿರುವ ಆಡಿಯೋ ನಿಜ, ಆದರೆ ಶಾಲಿನಿ ರಜನೀಶ್ ವಿರುದ್ಧದ ಆರೋಪ ಸುಳ್ಳು. ಮುಡಾ ಪ್ರಕರಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ನಟೇಶ್, ವಿನೋದ್ ಎಂಬಾತನ ಮಧ್ಯೆ ಹಣಕಾಸಿನ ವಿಚಾರ ನಡೆದಿತ್ತು. ಇದರಲ್ಲಿ ನನ್ನನ್ನೂ ಬಳಸಿಕೊಳ್ಳುವ ಪ್ರಯತ್ನ ಆಗಿದೆ. ವಿನೋದ್ ಮತ್ತು ನಟೇಶ್ ನಡುವಿನ ಹಣಕಾಸಿನ ವಿವಾದಕ್ಕೆ ಸಂಬಂಧಿಸಿದ ಆಡಿಯೋದಲ್ಲಿ, ಶಾಲಿನಿ ರಜನೀಶ್ ಅವರ ಬಗ್ಗೆ ನೀಡಲಾದ ಮಾಹಿತಿ ಸುಳ್ಳು. ಹೀಗಾಗಿ ನನ್ನ ತಪ್ಪಿಗಾಗಿ ಶಾಲಿನಿ ರಜನೀಶ್​ಗೆ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.

ಸ್ನೇಹಮಯಿ ಕೃಷ್ಣಗೆ ನಕಲಿ ಆಡಿಯೊ ನೀಡಿದ್ದ ವ್ಯಕ್ತಿ ಬಂಧನ
ವಿಚಾರಣೆ ವೇಳೆ ಸತ್ಯ ಬಿಚ್ಚಿಟ್ಟಿರುವ ಸ್ನೇಹಮಯಿ ಕೃಷ್ಣ, ವಿನೋದ್ ಎಂಬ ವ್ಯಕ್ತಿ ನನ್ನನ್ನು ದಾರಿ ತಪ್ಪಿಸಿದ್ದಾನೆ. ಮುಡಾ ಮಾಜಿ ಆಯುಕ್ತ ನಟೇಶ್ ಮತ್ತು ವಿನೋದ್ ನಡುವೆ ಹಳೆಯ ಹಣಕಾಸಿನ ವ್ಯವಹಾರವಿತ್ತು. ನಟೇಶ್ ಅವರಿಗೆ ವಿನೋದ್ ಹಣ ನೀಡಬೇಕಿತ್ತು. ಆ ಹಣವನ್ನು ಕೇಳಬಾರದು ಎಂಬ ಕಾರಣಕ್ಕೆ ವಿನೋದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಹೆಸರನ್ನು ಬಳಸಿ ಸುಳ್ಳು ದಾಖಲೆಗಳನ್ನು ಮತ್ತು ಮಾಹಿತಿಯನ್ನು ನೀಡಿದ್ದ. ವಿನೋದ್ ಕೊಟ್ಟ ದಾಖಲೆಗಳನ್ನು ನಂಬಿ ನಾನು ದೊಡ್ಡ ತಪ್ಪು ಮಾಡಿದೆ. ಈ ವಿಚಾರದಲ್ಲಿ ಶಾಲಿನಿ ರಜನೀಶ್ ಅವರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಸ್ನೇಹಮಯಿ ಕೃಷ್ಣ ನೀಡಿದ ಮಾಹಿತಿ ಆಧಾರದ ಮೇಲೆ ಸಿಸಿಬಿ ಪೊಲೀಸರು ವಿನೋದ್‌ನನ್ನು ಬಂಧಿಸಿದ್ದು, ಆರೋಪಿ ಮತ್ತು ದೂರುದಾರ ನಟೇಶ್ ನಡುವೆ ಕೆಲವು ಹಣಕಾಸು ವಹಿವಾಟುಗಳಿಂದಾಗಿ ದ್ವೇಷ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *