Greater Bengaluru news9: ನಗರದ ವರ್ತೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಯೋಗಾನಂದ್ ಅವರು ರೌಡಿಶೀಟರ್‌ಗಳೊಂದಿಗೆ ಕೈಜೋಡಿಸಿ ಕೊಲೆ ಪ್ರಕರಣದ ತನಿಖೆಯನ್ನು ಹಳ್ಳಹಿಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಎಲ್‌ಎಲ್‌ಬಿ ವಿದ್ಯಾರ್ಥಿ ರೇವಂತ್ ಹತ್ಯೆ ಪ್ರಕರಣದಲ್ಲಿ ಉದ್ದೇಶಪೂರ್ವಕ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಸಂತ್ರಸ್ತ ಕುಟುಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
2024ರ ಸೆಪ್ಟೆಂಬರ್ 18ರಂದು ತಮಿಳುನಾಡಿನ ಬಾಗಲೂರಿನಲ್ಲಿ 24 ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿ ರೇವಂತ್‌ರನ್ನು ರೌಡಿಶೀಟರ್ ರೇವಾ ಮತ್ತು ಆತನ ಗ್ಯಾಂಗ್ ಭೀಕರವಾಗಿ ಹತ್ಯೆ ಮಾಡಿದ್ದರು. ಸ್ನೇಹಿತ ಸ್ಟಾಲಿನ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಕೇಸ್ ದಾಖಲಿಸಲು ರೇವಂತ್ ಸಹಕರಿಸಿದ್ದ ಹಿನ್ನೆಲೆಯಲ್ಲಿ, ಪ್ರಕರಣ ವಾಪಸ್ ಪಡೆಯುವಂತೆ ರೇವಾ ಗ್ಯಾಂಗ್ ಒತ್ತಡ ಹೇರಿತ್ತು ಎನ್ನಲಾಗಿದೆ.
ರಾಜಿ ಮಾಡಿಕೊಳ್ಳೋಣ ಎಂದು ನಂಬಿಸಿ ಕರೆಸಿಕೊಂಡ ದುಷ್ಕರ್ಮಿಗಳು, ರೇವಂತ್‌ನ ಚಿಕ್ಕಪ್ಪನ ಕಣ್ಣೆದುರೇ ಆತನನ್ನು ಕೊಚ್ಚಿ ಕೊಂದಿದ್ದರು ಎಂದು ಕುಟುಂಬದವರು ದೂರಿದ್ದಾರೆ.
ತಮಿಳುನಾಡು ಪೊಲೀಸರಿಂದ ವರ್ಗಾವಣೆಯಾದ ಈ ಪ್ರಕರಣವನ್ನು ವರ್ತೂರು ಪೊಲೀಸರು ತನಿಖೆ ನಡೆಸಿದರು. ಆದರೆ, ನಿಯಮದಂತೆ 90 ದಿನಗಳೊಳಗೆ ಚಾರ್ಜ್‌ಶೀಟ್ ಸಲ್ಲಿಸದ ಹಿನ್ನೆಲೆಯಲ್ಲಿ ಜೈಲಿನಲ್ಲಿದ್ದ ರೌಡಿಶೀಟರ್ ರೇವಾ ಸೇರಿದಂತೆ ಏಳು ಮಂದಿ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
ಜಾಮೀನಿನ ಷರತ್ತಿನಂತೆ ರೇವಾ ಪ್ರತಿದಿನ ಠಾಣೆಗೆ ಬಂದು ಸಹಿ ಹಾಕಬೇಕೆಂದು ನ್ಯಾಯಾಲಯ ಆದೇಶಿಸಿದ್ದರೂ, ಇನ್ಸ್‌ಪೆಕ್ಟರ್ ಯೋಗಾನಂದ್ ಪ್ರಭಾವದಿಂದ ಆತ ಠಾಣೆಗೆ ಹಾಜರಾಗುತ್ತಿಲ್ಲ ಎಂದು ಆರೋಪಿಸಲಾಗಿದೆ. ಬದಲಾಗಿ, ಪೊಲೀಸರೇ ರೇವಾ ವಾಸಿಸುವ ಅಪಾರ್ಟ್‌ಮೆಂಟ್‌ಗೆ ತೆರಳಿ ಸಹಿ ಮಾಡಿಸಿಕೊಂಡು ಬರುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ರೇವಂತ್ ಕುಟುಂಬದವರು ಮತ್ತು ಪ್ರಕರಣದ ಸಾಕ್ಷಿಗಳಿಗೆ ರೌಡಿಗಳಿಂದ ಜೀವ ಬೆದರಿಕೆ ಇದ್ದರೂ, ರಕ್ಷಣೆ ಕೋರಿದ ಮನವಿಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ನ್ಯಾಯ ಒದಗಿಸಬೇಕಾದ ಠಾಣೆಯೇ ಆರೋಪಿಗಳ ಪರ ನಿಂತಿರುವುದರಿಂದ ನಾವು ಆತಂಕಕ್ಕೊಳಗಾಗಿದ್ದೇವೆ ಎಂದು ರೇವಂತ್ ಪೋಷಕರು ಹೇಳಿದ್ದಾರೆ. ರೌಡಿಶೀಟರ್ ಜೊತೆ ಸಖ್ಯ ಬೆಳೆಸಿರುವ ಇನ್ಸ್‌ಪೆಕ್ಟರ್ ವಿರುದ್ಧ ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.


