Greater bengaluru news9: ತೋಟಗಾರಿಕೆ, ಗಣಿ ಭೂವಿಜ್ಞಾನ ಇಲಾಖೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಅವರ ತಂದೆ ಶಾಮನೂರು ಶಿವಶಂಕರಪ್ಪ ಅವರ ನಿಧನದ ಬಳಿಕ ಎಲ್ಲಾ ಜವಾಬ್ದಾರಿಗಳು ಪುತ್ರ ಎಸ್ಎಸ್ ಮಲ್ಲಿಕಾರ್ಜುನ ಅವರ ಹೆಗಲಿಗೆ ಬಿದ್ದಿದ್ದು, ಈ ಒತ್ತಡಗಳಲ್ಲಿ ಸಚಿವ ಸ್ಥಾನ ನಿಭಾಯಿಸಲು ಕಷ್ಟವಾಗುತ್ತಿದೆ ಎಂದು ಎಸ್ಎಸ್ ಮಲ್ಲಿಕಾರ್ಜುನ ಅವರು ರಾಜೀನಾಮೆ ನೀಡಲು ಮುಂದಾಗಿದ್ದರು.
ಆದ್ರೆ, ಇದಕ್ಕೆ ಸಿದ್ದರಾಮಯ್ಯ, ಆಕ್ಷೇಪಿಸಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ. ಇಂತಹ ಸಂದರ್ಭದಲ್ಲಿ ನೀವು ರಾಜೀನಾಮೆ ನೀಡಿದರೆ ಜನಕ್ಕೆ ಸರ್ಕಾರದ ಬಗ್ಗೆ ತಪ್ಪು ಸಂದೇಶ ಹೋಗುತ್ತೆ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸ್ವತಃ ಎಸ್.ಎಸ್.ಮಲ್ಲಿಕಾರ್ಜುನ ಅವರೇ ಪ್ರತಿಕ್ರಿಯಿಸಿದ್ದು, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂಬುದು ಶುದ್ಧ ಸುಳ್ಳು. ರಾಜೀನಾಮೆ ಕೊಡ್ತೇನೆಂದು ಸಿಎಂ ಬಳಿ ಹೋಗಿದ್ದೆ ಎಂಬುದು ಸುಳ್ಳು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು. ಈ ಮೂಲಕ ರಾಜೀನಾಮೆ ನೀಡಲ್ಲ ಎಂದು ಕಂತೆ ಕಂತೆಗಳಿಗೆ ತೆರೆ ಎಳೆದರು.


