BBMP
Loading ...

State budget

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗಳ ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರದ ಬಜೆಟ್ ಮಂಡನೆಗೆ ಮುಹೂರ್ತ ನಿಗದಿಪಡಿಸಿಕೊಂಡಿದ್ದು, ಮಾ.6ರಂದು ಆಯವ್ಯಯ ಮಂಡನೆ ಮಾಡಲಿದ್ದಾರೆ. ಮುಖ್ಯಮಂತ್ರಿ ಕಾರ್ಯಾಲಯದ ಅಧಿಕೃತ ಮೂಲಗಳು ಈ ವಿಚಾರ ಸ್ಪಷ್ಟಪಡಿಸಿವೆ.

ಬಜೆಟ್ ಮಂಡನೆಗೆ ಮುಹೂರ್ತ ನಿಗದಿ ಮಾಡುವ ಮೂಲಕ ತಮ್ಮ ನಾಯಕತ್ವ ಅಬಾಧಿತ ಎಂಬ ಸಂದೇಶ ರವಾನೆಗೆ ಅವರು ಮುಂದಾಗಿದ್ದು ಈ ಬಾರಿ ಅಹಿಂದ ಕೇಂದ್ರೀಕೃತ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಂದ ಮಿಳಿತವಾದ ಜನಪ್ರಿಯ ಬಜೆಟ್‌ಗೆ ಅವರು ಸಿದ್ಧತೆ ನಡೆಸಿದ್ದಾರೆ.

ಈ ಬಜೆಟ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೊಂದು ಹೊಸ ದಾಖಲೆ ಬರೆಯವುದಕ್ಕೆ ಮುಂದಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ರಾಜಕಾರಣಿಗಳ ಪೈಕಿ ಅವರು 2ನೇ ಸ್ಥಾನ ಪಡೆಯಲಿದ್ದಾರೆ. 18 ಬಜೆಟ್ ಮಂಡನೆ ಮಾಡಿರುವ ಗುಜರಾತ್ ಹಣಕಾಸು ಸಚಿವ ಹಾಗೂ ಕರ್ನಾಟಕದ ಮಾಜಿ ರಾಜ್ಯಪಾಲ ವಜುಭಾಯ್ ವಾಲಾ ಮೊದಲ ಸ್ಥಾನದಲ್ಲಿದ್ದು, 17 ಬಜೆಟ್ ಮಂಡನೆ ಮಾಡುವ ಮೂಲಕ ಸಿದ್ದರಾಮಯ್ಯ 2ನೇ ಸ್ಥಾನಕ್ಕೆ ಏರಲಿದ್ದಾರೆ. 13 ಬಜೆಟ್ ಮಂಡಿಸಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 3ನೇ ಸ್ಥಾನವನ್ನು ಅಲಂಕರಿಸಿದರೆ, ಕೇಂದ್ರದಲ್ಲಿ 10 ಬಜೆಟ್ ಮಂಡನೆ ಮಾಡಿದ್ದ ಮುರಾರ್ಜಿ ದೇಸಾಯಿ ಮೊದಲ ಸ್ಥಾನದಲ್ಲಿದ್ದಾರೆ.

ಬಜೆಟ್‌ ಸಿದ್ಧತೆ ಆರಂಭಿಸಿದ ಸಿಎಂ

ಈ ಬಜೆಟ್‌ಗಾಗಿ ಸಿದ್ದರಾಮಯ್ಯನವರು ಈಗಾಗಲೇ ಸಿದ್ಧತೆ ಪ್ರಾರಂಭಿಸಿದ್ದಾರೆ. ಅಧಿಕಾರಿಗಳ ಜತೆಗೆ 2 ಪೂರ್ವಭಾವಿ ಸಭೆಗಳು ನಡೆದಿವೆ. ಜಂಟಿ ಅಧಿವೇಶನದ ಬಳಿಕ ಇಲಾಖಾವಾರು ಸಭೆ ನಡೆಸಲಿದ್ದಾರೆ. ಇದರ ಜತೆಗೆ ಫೆಬ್ರವರಿ ಮೊದಲ ವಾರದಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸಿಗುವ ಅನುದಾನ, 16ನೇ ಹಣಕಾಸು ಆಯೋಗದಿಂದ ಲಭಿಸುವ ತೆರಿಗೆ ಪಾಲು, ಕೇಂದ್ರ ಪ್ರಾಯೋಜಿತ ಯೋಜನೆಗಳ ಪರಿಸ್ಥಿತಿ ಇತ್ಯಾದಿಗಳನ್ನು ಆಧರಿಸಿ ಮುಂದಿನ ನಡೆ ಇಡಲಿದ್ದಾರೆ. ಹಣಕಾಸು ಇಲಾಖೆ ಮೂಲಗಳ ಪ್ರಕಾರ ಈ ಬಾರಿಯೂ ರಾಜ್ಯದ ಒಟ್ಟಾರೆ ಸಾಲದ ಬಾಬು ಹೆಚ್ಚಲಿದ್ದು, ದಾಖಲೆಯ ಜತೆಗೆ ಆರ್ಥಿಕ ಸಮತೋಲನ ಸಾಧಿಸಬೇಕಾದ ಹಗ್ಗದ ಮೇಲಿನ ನಡಿಗೆ ಸಿದ್ದರಾಮಯ್ಯ ಅವರದ್ದಾಗಲಿದೆ.

ಬಜೆಟ್‌ಗೂ ಮುನ್ನ ವರಿಷ್ಠರ ಭೇಟಿ?

ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡುವ ಸಾಧ್ಯತೆಗಳು ದಟ್ಟವಾಗಿದೆ. ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ದೆಹಲಿಗೆ ಬರುವಂತೆ ರಾಹುಲ್ ಗಾಂಧಿ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿ ಬಜೆಟ್ ಸ್ವರೂಪದ ಬಗ್ಗೆ ವರಿಷ್ಠರಿಗೂ ಅವರು ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *