Greater Bangalore news9 : ಕಾನ್ಫಿಡೆಂಟ್ ಗ್ರೂಪ್ ಚೇರಮೆನ್ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ (ಎಸ್ಐಟಿ) ರಚಿಸಿದೆ. ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಅವರ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದ್ದು, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕೂಡ ತಂಡದ ಭಾಗವಾಗಿರಲಿದ್ದಾರೆ ಎಂದು ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಇದುವರೆಗೂ ಈ ಪ್ರಕರಣದ ತನಿಖೆಯನ್ನು ಅಶೋಕನಗರ ಪೊಲೀಸ್ ಠಾಣೆಯ ಪೊಲೀಸರು ನಡೆಸುತ್ತಿದ್ದರು. ಇದೀಗ ಪ್ರಕರಣದ ತನಿಖೆಯನ್ನು ಅಶೋಕನಗರ ಪೊಲೀಸರಿಂದ ಎಸ್ಐಟಿ ಅಧಿಕೃತವಾಗಿ ವಹಿಸಿಕೊಳ್ಳಲಿದೆ. ಕೇಸ್ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ಸಾಕ್ಷ್ಯಗಳು, ಎಫ್ಐಆರ್ ಪ್ರತಿಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಅಶೋಕನಗರ ಪೊಲೀಸರು ಎಸ್ಐಟಿಗೆ ಹಸ್ತಾಂತರಿಸಲಿದ್ದಾರೆ.
ಎಸ್ಐಟಿ ನೇತೃತ್ವ ವಹಿಸಿರುವ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಅವರು ನಿನ್ನೆ ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ತನಿಖೆಯ ಪೂರ್ಣ ಹೊಣೆಗಾರಿಕೆಯನ್ನು ವಹಿಸಿಕೊಂಡು, ಎಲ್ಲಾ ಆಯಾಮಗಳಿಂದ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲಾಗಲಿದೆ.
ಸಿ.ಜೆ. ರಾಯ್ ಆತ್ಮಹತ್ಯೆ ಮಾಡಿಕೊಳ್ಳಲು ಎದುರಾದ ನಿಖರ ಪರಿಸ್ಥಿತಿ ಏನು? ಆದಾಯ ತೆರಿಗೆ ಇಲಾಖೆ ದಾಳಿಯಿಂದ ಅವರು ಒತ್ತಡಕ್ಕೆ ಒಳಗಾಗಿದ್ದರಾ? ಅಥವಾ ಬೇರೆ ಯಾರಾದರೂ ಅವರ ಮೇಲೆ ಮಾನಸಿಕ ಅಥವಾ ಹಣಕಾಸಿನ ಒತ್ತಡ ಹೇರಿದ್ದರಾ? ಹಣಕಾಸು ಸಂಕಷ್ಟ ಇದೆಯೇ? ಬ್ಲ್ಯಾಕ್ಮೇಲ್ನಂತಹ ಅಂಶಗಳು ಕಾರಣವಾಗಿದೆಯೇ? ಎಂಬ ಎಲ್ಲ ಆ್ಯಂಗಲ್ಗಳನ್ನು ಒಳಗೊಂಡಂತೆ ತನಿಖೆ ನಡೆಸಿ ಸತ್ಯಾಂಶವನ್ನು ಬಯಲಿಗೆ ತರುವ ಹೊಣೆ ಎಸ್ಐಟಿಯ ಮೇಲಿದೆ.


