ಬೆಂಗಳೂರು: ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ( Confident Group Chairman ) ಸಿ.ಜೆ. ರಾಯ್ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಗರದ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಇಂದು (ಜ.30) ನಡೆದಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಪದೇಪದೆ ಐಟಿ ದಾಳಿಗೆ ಹೆದರಿ ಇಂಥದ್ದೊಂದು ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇಂದು ಕೂಡ ಐಟಿ ಅಧಿಕಾರಿಗಳು ಕಾನ್ಫಿಡೆಂಟ್ ಗ್ರೂಪ್ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನಗರದ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ.
ಕಾನ್ಫಿಡೆಂಟ್ ಗ್ರೂಪ್ ಮೇಲೆ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಹಲವು ಬಾರಿ ಐಟಿ ದಾಳಿ ನಡೆದಿತ್ತು.
ಅಂದಹಾಗೆ, ಡಾ. ಸಿ.ಜೆ. ರಾಯ್, ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಮತ್ತು ಚೇರ್ಮನ್ ಆಗಿದ್ದರು. ಬೆಂಗಳೂರಿನಲ್ಲಿ ಜನಿಸಿ ಬೆಳೆದ ಕೇರಳ ಮೂಲದ ಉದ್ಯಮಿ ಆಗಿದ್ದರು. ಫ್ರಾನ್ಸ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಶಿಕ್ಷಣ ಪಡೆದು, ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಡಾಕ್ಟರೇಟ್ ಪಡೆದರು. ಹೆವ್ಲೆಟ್-ಪ್ಯಾಕರ್ಡ್‌ನಂತಹ 500 ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ, ಭಾರತದಲ್ಲಿ ತಮ್ಮದೇ ಆದ ವ್ಯಾಪಾರವನ್ನು ಆರಂಭಿಸಿ, ಕಾನ್ಫಿಡೆಂಟ್ ಗ್ರೂಪ್ ಅನ್ನು ಸ್ಥಾಪಿಸಿದರು.
ಅಂದಹಾಗೆ, ಕಾನ್ಫಿಡೆಂಡ್ ಗ್ರೂಪ್, ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾಗಿ ಬೆಳೆಯಿತು. ಬೆಂಗಳೂರು, ಕೇರಳ ಮತ್ತು ಯುಎಇಯಲ್ಲಿ ವ್ಯಾಪಕವಾದ ಯೋಜನೆಗಳನ್ನು ಅಭಿವೃದ್ಧಿಪಡಿಸಿ, ಶೂನ್ಯ ಸಾಲದ ಮಾದರಿ, ನಾವೀನ್ಯತೆಯ ಗೃಹ ವಿನ್ಯಾಸಗಳು ಮತ್ತು ಗುಣಮಟ್ಟದ ಮೇಲೆ ನೀಡುವ ಒತ್ತುನಿಂದ ಈ ಕಂಪನಿ ಪ್ರಸಿದ್ಧಿ ಪಡೆಯಿತು.
ರಿಯಲ್ ಎಸ್ಟೇಟ್ ಹೊರತುಪಡಿಸಿ, ಹಾಸ್ಪಿಟಾಲಿಟಿ, ಮನರಂಜನೆ, ಶಿಕ್ಷಣ, ಏವಿಯೇಷನ್ ಮತ್ತು ಇತರ ಕ್ಷೇತ್ರಗಳಲ್ಲಿಯೂ ಸಿ.ಜೆ. ರಾಯ್ ಅವರು ಉದ್ಯಮವನ್ನು ವಿಸ್ತರಿಸಿದ್ದರು. ಸಿನಿಮಾ ನಿರ್ಮಾಣದಲ್ಲೂ ಭಾಗಿಯಾಗಿದ್ದರು. ಅಂತರರಾಷ್ಟ್ರೀಯ ಕ್ರೀಡಾ ಪ್ರಾಯೋಜಕತ್ವಗಳ ಮೂಲಕವೂ ಗುರುತಿಸಿಕೊಂಡಿದ್ದರು.


