BBMP
Loading ...

KJ George

Greatger Bengaluru News9 : ಇಂಧನ ಇಲಾಖೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪದಿಂದ ಬೇಸತ್ತ ಇಂಧನ ಸಚಿವ ಕೆಜೆ ಜಾರ್ಜ್ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಇಂಧನ ಇಲಾಖೆಯ ಕೆಲ ಅಧಿಕಾರಿಗಳ ವರ್ಗಾವಣೆ ಮತ್ತು ಅಮಾನತು ವಿಚಾರದಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪವಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಈ ನಿರ್ಧಾರಗಳು ಸರ್ಕಾರದೊಳಗೇ ಅಸಮಾಧಾನಕ್ಕೆ ಕಾರಣವಾಗಿದ್ದು, ವಿಶೇಷವಾಗಿ ಇಂಧನ ಸಚಿವ ಕೆಜೆ ಜಾರ್ಜ್ ಅವರನ್ನು ತೀವ್ರವಾಗಿ ಬೇಸರಗೊಳಿಸಿತ್ತು ಎಂದು ತಿಳಿದುಬಂದಿದೆ.

ಇಂಧನ ಇಲಾಖೆಯ ಕೆಲ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿ ಮುಖ್ಯಮಂತ್ರಿ ಕಚೇರಿಯಿಂದ ಆದೇಶಗಳು ಹೊರಡಿಸಲಾಗಿತ್ತು. ಜೊತೆಗೆ, ಕೆಲ ಅಧಿಕಾರಿಗಳನ್ನು ಅಮಾನತುಗೊಳಿಸುವ ಕ್ರಮವೂ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆಗಳಿಂದ ಅಸಮಾಧಾನಗೊಂಡ ಜಾರ್ಜ್, ‘ಮಂತ್ರಿಯಾಗಿ ನನ್ನ ಮಾತಿಗೆ ಬೆಲೆ ಇಲ್ಲದಿದ್ದರೆ ನಾನು ಏಕೆ ಸರ್ಕಾರದಲ್ಲಿ ಇರಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರೆನ್ನಲಾಗಿದೆ.

ಅಲ್ಲದೆ, ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರವನ್ನೂ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ‘ನಾನು ನಿಮ್ಮ ಜತೆ ಇರುತ್ತೇನೆ, ಆದರೆ ಸರ್ಕಾರದಲ್ಲಿ ಇರುವುದಿಲ್ಲ’ ಎಂದು ಜಾರ್ಜ್ ಹೇಳಿದ್ದಾರಂತೆ. ಈ ಘಟನೆಯಿಂದ ಮನನೊಂದು ಅವರು ಸಂಪುಟ ಸಭೆಗೆ ಸಹ ಗೈರಾಗಿದ್ದರು ಎಂಬುದು ತಿಳಿದುಬಂದಿದೆ.

ಘಟನೆಯ ಗಂಭೀರತೆ ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯ ತಕ್ಷಣ ಮಧ್ಯಪ್ರವೇಶಿಸಿದೆ. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಮೂಲಕ ಕೆಜೆ ಜಾರ್ಜ್ ಅವರೊಂದಿಗೆ ಸಂಧಾನ ನಡೆಸಲಾಗಿದ್ದು, ಅವರ ಅಸಮಾಧಾನವನ್ನು ಆಲಿಸಿ ಮಾತುಕತೆ ಮೂಲಕ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಪೊನ್ನಣ್ಣ ಅವರ ಸಂಧಾನದ ನಂತರ, ಇಂಧನ ಇಲಾಖೆಯ ಕೆಲ ಅಧಿಕಾರಿಗಳ ಅಮಾನತು ಆದೇಶವನ್ನು ಮುಖ್ಯಮಂತ್ರಿ ಹಿಂಪಡೆದಿದ್ದಾರೆ. ಇದರಿಂದ ಸರ್ಕಾರದೊಳಗಿನ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನಗೊಂಡಿದೆ ಎಂದು ಹೇಳಲಾಗುತ್ತಿದೆ.

ಆದರೆ, ಇಂಧನ ಇಲಾಖೆಯಲ್ಲಿ ನಡೆದ ಈ ಘಟನೆ ಸರ್ಕಾರದ ಒಳಜಗಳ ಹಾಗೂ ಅಧಿಕಾರ ಹಂಚಿಕೆಯ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *