BBMP
Loading ...

Beelagi

Greater Bengaluru News9 : ಕರ್ತವ್ಯನಿಷ್ಠ ಐಎಎಸ್ ಅಧಿಕಾರಿಯಾಗಿದ್ದ ದಿವಂಗತ ಮಹಾಂತೇಶ್ ಬೀಳಗಿ ಕುಟುಂಬಕ್ಕೆ ರಾಜ್ಯ ಸರ್ಕಾರ ಆಸರೆಯಾಗಿ ನಿಂತಿದೆ. ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾದ ಮಹಾಂತೇಶ್ ಬೀಳಗಿ ಪುತ್ರಿ ಕುಮಾರಿ ಚೈತನ್ಯಾ ಎಂ. ಬೀಳಗಿಗೆ ಅನುಕಂಪದ ಆಧಾರದ ಮೇಲೆ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಸಹಾಯಕ ಹುದ್ದೆಗೆ ನೇಮಕಾತಿ ನೀಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಕುಮಾರಿ ಚೈತನ್ಯಾ ಬೀಳಗಿಗೆ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್ ಹಾಗೂ ಶಿವಾನಂದ ಪಾಟೀಲ್ ಉಪಸ್ಥಿತರಿದ್ದರು. ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಈ ವೇಳೆ ಹಾಜರಿದ್ದು, ಕುಟುಂಬಕ್ಕೆ ಧೈರ್ಯ ತುಂಬಿದರು.

ಭಾರತೀಯ ಆಡಳಿತ ಸೇವೆಯ ದಕ್ಷ ಹಾಗೂ ಸಮರ್ಪಿತ ಅಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಅವರು ಸೇವೆಯಲ್ಲಿದ್ದಾಗಲೇ 25-11-2025 ರಂದು ನಿಧನರಾಗಿದ್ದರು. ಕುಟುಂಬದ ಆಧಾರಸ್ತಂಭವಾಗಿದ್ದ ಅಧಿಕಾರಿಯ ಅಗಲಿಕೆಯಿಂದ ಉಂಟಾದ ಸಂಕಷ್ಟವನ್ನು ಮನಗಂಡ ಸರ್ಕಾರ, ಕರ್ನಾಟಕ ನಾಗರೀಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು–1996ರ ನಿಯಮ 6(1)ರ ಅಡಿಯಲ್ಲಿ ಈ ನೇಮಕಾತಿ ಕ್ರಮ ಕೈಗೊಂಡಿದೆ.

ಕುಮಾರಿ ಚೈತನ್ಯಾ ಎಂ. ಬೀಳಗಿ ಅವರನ್ನು ರೂ. 49,050 ರಿಂದ ರೂ. 92,500 ವೇತನ ಶ್ರೇಣಿಯ ಸಹಾಯಕ ಹುದ್ದೆಗೆ, ಎರಡು ವರ್ಷಗಳ ಪರೀಕ್ಷಾರ್ಥಾವಧಿಯೊಂದಿಗೆ ನೇಮಕ ಮಾಡಲಾಗಿದೆ.ನೇಮಕಾತಿ ಆದೇಶ ಹೊರಡಿಸಿದ 15 ದಿನಗಳ ಒಳಗಾಗಿ ಅಭ್ಯರ್ಥಿಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಆಡಳಿತ-1), ಬಹುಮಹಡಿ ಕಟ್ಟಡದ ಕೊಠಡಿ ಸಂಖ್ಯೆ 428ರಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು.ಅಭ್ಯರ್ಥಿಯು ತಾನು ವ್ಯಾಸಂಗ ಮಾಡಿದ ಸಂಸ್ಥೆಗೆ ಸಂಬಂಧಪಡದ ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ ನಡತೆ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

Leave a Reply

Your email address will not be published. Required fields are marked *