Greater Bengaluru News9: ಸುಖಾಸುಮ್ಮನೇ ಸರ್ಕಾರಿ ಕಚೇರಿಗಳಿಗೆ ನುಗ್ಗಿ ವಿಡಿಯೋ ಮಾಡಿ, ಕಿರುಕುಳ ನೀಡುವವರ ವಿರುದ್ಧ ರಾಜ್ಯದ ಗೃಹ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಯಾರು ಕೂಡ ಇಂಥಾ ದುರ್ವರ್ತನೆಗೆ ಕೈಹಾಕುವಂತಿಲ್ಲ. ಒಂದು ವೇಳೆ ಯಾರೇ ಆಗಲಿ ಇಂಥಾ ಚಟುವಟಿಕೆಯಲ್ಲಿ ಭಾಗಿಯಾದರೆ, ಅಂತಹವರ ವಿರುದ್ಧ ಕಠಿಣ ಕ್ರಮ ತಗೆದುಕೊಳ್ಳುವುದಾಗಿ ಪೊಲೀಸ್ ಮಹಾನಿರ್ದೇಶಕರು (DG-IGP) ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸುವ ಹಾಗೂ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುವ ವ್ಯಕ್ತಿಗಳ ವಿರುದ್ಧ ರಾಜ್ಯಾದ್ಯಂತ ಪ್ರಕರಣ ದಾಖಲಿಸುವಂತೆ ಪೊಲೀಸ್ ಮಹಾನಿರ್ದೇಶಕರು (DG-IGP) ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಕಚೇರಿಗಳಿಗೆ ನುಗ್ಗಿ ಅಧಿಕಾರಿಗಳ ಜೊತೆ ದುಂಡಾವರ್ತನೆ ಮಾಡುವುದು, ಅವರಿಗೆ ಹಾರ ಹಾಕಿ ಸನ್ಮಾನ ಮಾಡುವ ನೆಪದಲ್ಲಿ ಸಾರ್ವಜನಿಕವಾಗಿ ಅವಮಾನ ಮಾಡುವುದು ಹಾಗೂ ಪೊಲೀಸ್ ಠಾಣೆಗಳ ಒಳಗೆ ಗಲಾಟೆ ಮಾಡುವ ಕೃತ್ಯಗಳು ಇತ್ತೀಚೆಗೆ ಹೆಚ್ಚಾಗಿವೆ. ಈ ಎಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿ-ಐಜಿಪಿ ಅವರು, ರಾಜ್ಯದ ಎಲ್ಲಾ ವಲಯಗಳ ಎಸ್ಪಿಗಳು, ಕೆಜಿಎಫ್ ಹಾಗೂ ರೈಲ್ವೇ ಪೊಲೀಸರಿಗೆ ಪತ್ರ ಬರೆದಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದಾರೆ.
ಇತ್ತೀಚೆಗಷ್ಟೇ ಚನ್ನಪಟ್ಟಣದ ಟೌನ್ ಇನ್ಸ್‌ಪೆಕ್ಟರ್ ರವಿಕಿರಣ್ ಅವರೊಂದಿಗೆ ಕೆ.ಆರ್.ಎಸ್ ಕಾರ್ಯಕರ್ತರು ಕಿರಿಕ್ ಮಾಡಿಕೊಂಡಿದ್ದರು. ‘ಒನ್ ವೇ’ ರಸ್ತೆಯಲ್ಲಿ ಬಸ್ ತಂದು ನಿಯಮ ಉಲ್ಲಂಘಿಸಿದ್ದಲ್ಲದೆ, ಅದನ್ನು ಪ್ರಶ್ನಿಸಿದ ಪೊಲೀಸರ ಜೊತೆಗೇ ಗಲಾಟೆ ನಡೆಸಿದ್ದರು ಎಂಬ ಆರೋಪ. ಈ ಕುರಿತು ಬೆಂಗಳೂರು ದಕ್ಷಿಣ ಎಸ್ಪಿ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸುದೀರ್ಘ ಪತ್ರ ಬರೆದು ವಿವರ ನೀಡಿದ್ದರು. ಈ ಘಟನೆಯನ್ನು ಮೂಲವಾಗಿಟ್ಟುಕೊಂಡು ಈಗ ಇಡೀ ರಾಜ್ಯದ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ರವಾನೆಯಾಗಿದೆ.
ಕೇವಲ ಪೊಲೀಸ್ ಇಲಾಖೆ ಮಾತ್ರವಲ್ಲದೆ, ಎಲ್ಲಾ ಸರ್ಕಾರಿ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೂ ಈ ಕುರಿತು ಆದೇಶ ನೀಡಲು ಮನವಿ ಮಾಡಲಾಗಿದೆ. ಯಾವುದೇ ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅಂತಹ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಲು ನಿರ್ಧರಿಸಲಾಗಿದೆ. ಅಧಿಕಾರಿಗಳ ಘನತೆಗೆ ಧಕ್ಕೆ ತರುವ ಅಥವಾ ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಇಲಾಖೆ ರವಾನಿಸಿದೆ.
ಇದೀಗ ಕೆಆರ್‌ಎಸ್ ಕಾರ್ಯಕರ್ತರ ಪ್ರಶ್ನೆ, ಭ್ರಷ್ಟಾಧಿಕಾರಿಗಳನ್ನ ಪ್ರಶ್ನಿಸಿದರೆ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಕೇಸ್ ಮಾಡುತ್ತೀರಿ ಆದರೆ ಶಿಡ್ಲಘಟ್ಟದ ಮಹಿಳಾ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಿದರೂ ಇದುವರೆಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನ ಪೊಲೀಸರು ಯಾಕೆ ಬಂಧಿಸಲಾಗಿಲ್ಲ? ಇದು ಕರ್ತವ್ಯಕ್ಕೆ ಅಡ್ಡಿಪಡಿಸಿದಂತಲ್ಲವೇ? ಮಹಿಳಾ ಅಧಿಕಾರಿಗೆ ಕೆಟ್ಟ ಕೊಳಕು ಭಾಷೆಯಲ್ಲಿ ಮಾತನಾಡಿದರೂ ಯಾಕೆ ಬಂಧಿಸಲು ಹಿಂದೇಟು? ಪೊಲೀಸ್ ಕಾನೂನುಗಳು ಕೇವಲ ದುರ್ಬಲ ಮೇಲೆ, ಅನ್ಯಾಯ ಪ್ರಶ್ನಿಸುವವರ ಮೇಲೆಯೇ? ಇದಕ್ಕೆ ಆದೇಶ ಮಾಡುವ ಪೊಲೀಸ್ ಅಧಿಕಾರಿಗಳು ಏನು ಉತ್ತರ ಕೊಡ್ತಾರೆ? ಮಹಿಳಾ ಅಧಿಕಾರಿಗೆ ನಿಂದಿಸಿರುವ ಕಾಂಗ್ರೆಸ್ ಮುಖಂಡನ ಬಂಧಿಸುವ ಧೈರ್ಯ ಪೊಲೀಸರಿಗಿಲ್ಲವೇ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


