Greater Bengaluru News9 : ಸಂಕ್ರಾಂತಿ ಅಂದ್ರೆ ಕೇವಲ ಎಳ್ಳು-ಬೆಲ್ಲದ ಹಬ್ಬವಲ್ಲ. ವಿವಿಧ ರಾಜ್ಯಗಳಲ್ಲಿ ವಿಶೇಷ ಹಾಗೂ ವಿಭಿನ್ನವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಮಗಳ ಮದುವೆ ನಂತರ ಮೊದಲ ಸಂಕ್ರಾಂತಿಗೆ ಮನೆಗೆ ಬಂದ ಅಳಿಯನಿಗೆ ಅತ್ತೆ-ಮಾವ ನೀಡಿರುವ ಸರ್ಪ್ರೈಸ್ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ.
ಅಳಿಯನಿಗೆ ಒಂದಲ್ಲ, ಎರಡಲ್ಲ, ಬರೋಬ್ಬರಿ 290 ಬಗೆಯ ಭೋಜನ ಸಿದ್ಧಪಡಿಸಿ, ಉಣಬಡಿಸಿದ್ದಾರೆ. ಆಂಧ್ರಪ್ರದೇಶದ ನರಸೀಪಟ್ಟಣಂ ಈ ವರ್ಷದ ಸಂಕ್ರಾಂತಿ ಸಂಭ್ರಮವನ್ನು ಈ ರೀತಿ ವಿಭಿನ್ನ ಹಾಗೂ ಭರ್ಜರಿಯಾಗಿ ಆಚರಿಸಿರುವುದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಮಗಳ ಮದುವೆಯ ನಂತರದ ಮೊದಲ ಸಂಕ್ರಾಂತಿಯನ್ನು ಅತ್ಯಂತ ವಿಶೇಷವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ, ನಾಲೆಂ ರಮೇಶ್ ಕುಮಾರ್ ಮತ್ತು ಅವರ ಕಲಾವತಿ ದಂಪತಿ ತಮ್ಮ ಅಳಿಯ ಶ್ರೀಹರ್ಷ ಅವರಿಗೆ ಇಂತಹ ಅದ್ಧೂರಿ ಆತಿಥ್ಯ ನೀಡಿದ್ದಾರೆ. ಇದರ ಭಾಗವಾಗಿ, ಅವರು 290 ಬಗೆಯ ಸಾಂಪ್ರದಾಯಿಕ ಆಂಧ್ರ ಶೈಲಿಯ ಅಡುಗೆಗೆಳನ್ನು ಒಳಗೊಂಡ ಭರ್ಜರಿ ಭೋಜನದ ರುಚಿ ತೋರಿಸಿದ್ದಾರೆ.
ಈ ವಿಶೇಷ ಭೋಜನವು ಗೋದಾವರಿ ಪ್ರದೇಶದ ಸಂಪ್ರದಾಯಕ್ಕೆ ಅನುಗುಣವಾಗಿ ಸಿದ್ಧಗೊಂಡಿದ್ದು, ಆಂಧ್ರದ ಶ್ರೀಮಂತ ಆಹಾರ ಸಂಸ್ಕೃತಿಯ ಸಂಪೂರ್ಣ ವೈಭವವನ್ನು ಪ್ರತಿಬಿಂಬಿಸಿದೆ. ಹಬ್ಬದ ದಿನ ನರಸೀಪಟ್ಟಣಂನ ಶಾಂತಿನಗರದಲ್ಲಿರುವ ಪತ್ನಿಯ ತವರಿಗೆ ಅಳಿಯ ಶ್ರೀಹರ್ಷ ಆಗಮಿಸಿದಾಗ, ಮನೆ ತುಂಬೆಲ್ಲ ಅಡುಗೆಗಳ ಸಾಲು ನೋಡಿ ಅವರು ಕ್ಷಣಕಾಲ ಅಚ್ಚರಿಗೊಂಡಿದ್ದಾರೆ.
ಭೋಜನದಲ್ಲಿ ಏನೆಲ್ಲ ಇತ್ತು?
ಬಾಳೆ ಎಲೆಗಳ ಮೇಲೆ ಸಜ್ಜುಗೊಂಡಿದ್ದ ಭೋಜನದಲ್ಲಿ ನಾನಾ ಬಗೆಯ ಪಾಯಸಗಳು, ಲಡ್ಡು, ಪೊಂಗಲ್, ಒಬ್ಬಟ್ಟು, ಕಾಜಾ ಮುಂತಾದ ಸಿಹಿತಿಂಡಿಗಳು, ಜೊತೆಗೆ ಪಚ್ಚಡಿ, ಆಂಧ್ರ ಶೈಲಿಯ ಕೂರ, ದಾಲ್, ಸಾಂಬಾರ್, ರಸಂ, ವಡೆ, ಹಪ್ಪಳ, ಫ್ರೈಗಳು, ಉಪ್ಪು-ಖಾರ ತಿನಿಸುಗಳು ಸೇರಿ ಆಂಧ್ರ ಸಂಪ್ರದಾಯದ ಇನ್ನೂರಕ್ಕೂ ಹೆಚ್ಚು ಖಾದ್ಯಗಳು ಇದ್ದವು.
29 ವರ್ಷದ ಶ್ರೀಹರ್ಷ ಅವರ ಗೌರವಕ್ಕಾಗಿ ವಿಶೇಷವಾಗಿ ಈ 290 ಬಗೆಯ ಭೋಜನ ಸಿದ್ಧಪಡಿಸಲಾಗಿದ್ದು, “ಅಳಿಯನು ನಮ್ಮ ಕುಟುಂಬದ ಮಗನೇ” ಎಂಬ ಭಾವನೆಯೇ ಈ ಆಚರಣೆಗೆ ಪ್ರೇರಣೆ ಎಂದು ಕುಟುಂಬದವರು ವಿವರಿಸಿದ್ದಾರೆ. “ಮಗಳ ಮೊದಲ ಸಂಕ್ರಾಂತಿ ನಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣ. ಅದನ್ನು ಸಂಪ್ರದಾಯಬದ್ಧವಾಗಿ, ಭವ್ಯವಾಗಿ ಆಚರಿಸಲು ನಿರ್ಧರಿಸಿದ್ದೇವೆ” ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
ಈ ಅಪರೂಪದ ಆತಿಥ್ಯ ಕಾರ್ಯಕ್ರಮದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರಿಂದ ಅಚ್ಚರಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹುತೇಕ ಜನರು ಇದನ್ನು ತೆಲುಗು ಆತಿಥ್ಯ ಮತ್ತು ಸಂಸ್ಕೃತಿಯ ಗರ್ವದ ಸಂಕೇತ ಎಂದು ಕೊಂಡಾಡಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಅಡುಗೆಗಳನ್ನು ಒಬ್ಬರಿಂದ ತಿಂದು ತೇಗಲು ಸಾಧ್ಯವೇ? ಎಂದು ಹುಬ್ಬೇರಿಸಿದ್ದಾರೆ.
ಕೆಲ ಟೀಕೆಗೂ ಪ್ರತಿಕ್ರಿಯಿಸಿರುವ ಕುಟುಂಬ “ಇಲ್ಲಿ ಯಾವುದೇ ಆಹಾರ ವ್ಯರ್ಥವಾಗಿಲ್ಲ. ಉಳಿದ ಭೋಜನವನ್ನು ಸಂಬಂಧಿಕರು, ನೆರೆಹೊರೆಯವರು ಮತ್ತು ಅಗತ್ಯವಿರುವವರಿಗೆ ಹಂಚಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಂಪ್ರದಾಯದ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಪಾಲಿಸಲಾಗಿದೆ ಎಂದು ಕುಟುಂಬ ತಿಳಿಸಿದೆ. ಅಳಿಯನಿಗೆ ನೀಡಿದ ಈ 290 ಬಗೆಯ ಸಂಕ್ರಾಂತಿ ಭೋಜನ, ಆಂಧ್ರಪ್ರದೇಶದ ಆಹಾರ ಸಂಸ್ಕೃತಿ, ಕುಟುಂಬ ಬಂಧನ ಮತ್ತು ಆತಿಥ್ಯದ ಮೌಲ್ಯಗಳನ್ನು ದೇಶದ ಗಮನಕ್ಕೆ ತಂದ ಅಪರೂಪದ ಘಟನೆಯಾಗಿ ಚರ್ಚೆಯಲ್ಲಿದೆ.


