Greater Bengaluru News9 : ಬಹು ದಿನಗಳಿಂದ ಕಾಯುತ್ತಿದ್ದ ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಜಿಬಿಎ ವ್ಯಾಪ್ತಿಯ 369 ವಾರ್ಡ್‌ಗಳ ಮೀಸಲಾತಿ ಕರಡು ಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ. ಈ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆ ಮತ್ತೊಂದು ಹಂತ ತಲುಪಿದ್ದು, ಚುನಾವಣೆ ನಡೆಯುವ ನಿರೀಕ್ಷೆಗೆ ಹೊಸ ವೇಗ ಸಿಕ್ಕಂತಾಗಿದೆ. ಈ ಮೀಸಲಾತಿ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಇರುವ ಕಾಲಾವಕಾಶ, ಈ ನಿಟ್ಟಿನಲ್ಲಿ ಎಷ್ಟು ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಕರಡು ಮೀಸಲಾತಿ ಪಟ್ಟಿಗೆ ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ಜಿಬಿಎ ನೀಡಿದೆ. ಆಸಕ್ತ ನಾಗರಿಕರು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಆಕ್ಷೇಪಣೆಗಳನ್ನು ಜನವರಿ 21ರ ಸಂಜೆ 5.30 ಗಂಟೆಯೊಳಗೆ* ಸಲ್ಲಿಸಬಹುದಾಗಿದೆ. ಆಕ್ಷೇಪಣೆಗಳ ಪರಿಶೀಲನೆಯ ಬಳಿಕ *ಜನವರಿ ಕೊನೆಯ ವೇಳೆಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಇದ್ದ ಅಡೆತಡೆ ನಿವಾರಣೆ ಬಹುತೇಕ ನಿವಾರಣೆ!
ಈಗಾಗಲೇ ಜಿಬಿಎ ವ್ಯಾಪ್ತಿಯಲ್ಲಿ ವಾರ್ಡ್ ವಿಂಗಡಣೆ, ಗಡಿ ಗುರುತಿಸುವಿಕೆ ಹಾಗೂ ಭೌಗೋಳಿಕ ಪುನರ್ ರಚನೆ ಕಾರ್ಯಗಳು ಪೂರ್ಣಗೊಂಡಿದ್ದವು. ಮೀಸಲಾತಿ ಪಟ್ಟಿ ಪ್ರಕಟಗೊಳ್ಳುವುದು ಮಾತ್ರ ಬಾಕಿ ಇತ್ತು. ಇದೀಗ ಆ ಹಂತವೂ ಮುಗಿದಿರುವುದರಿಂದ ಚುನಾವಣೆ ಘೋಷಣೆಗೆ ಅಗತ್ಯವಿರುವ ಪ್ರಮುಖ ಅಡೆತಡೆ ನಿವಾರಣೆಯಾದಂತಾಗಿದೆ.
ಎಷ್ಟು ವಾರ್ಡ್‌ಗಳಿಗೆ ಮೀಸಲಾತಿ ನಿಗದಿ!
ಪ್ರಕಟಿಸಿದ ಕರಡು ಪಟ್ಟಿಯ ಪ್ರಕಾರ, *ಒಟ್ಟು 369 ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಮಹಿಳಾ ಮೀಸಲಾತಿ, ಎಸ್‌ಸಿ/ಎಸ್‌ಟಿ, ಹಿಂದುಳಿದ ವರ್ಗಗಳು ಹಾಗೂ ಸಾಮಾನ್ಯ ವರ್ಗಗಳ ಅನುಪಾತದ ಆಧಾರದಲ್ಲಿ ಈ ಮೀಸಲಾತಿ ಮಾಡಲಾಗಿದೆ. ಈ ಪ್ರಕ್ರಿಯೆ ಸಂವಿಧಾನಾತ್ಮಕ ಮಾರ್ಗಸೂಚಿಗಳು ಮತ್ತು ಸರ್ಕಾರದ ನಿಯಮಾವಳಿಗಳನ್ನು ಅನುಸರಿಸಿ ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ.
5 ಮಹಾನಗರ ಪಾಲಿಕೆಗಳಿಗೆ ಪ್ರತ್ಯೇಕ ಮೀಸಲಾತಿ!
ಜಿಬಿಎ ವ್ಯಾಪ್ತಿಗೆ ಒಳಪಡುವ ಐದು ನಗರ ಪಾಲಿಕೆಗಳಿಗೂ ಪ್ರತ್ಯೇಕವಾಗಿ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದರಿಂದಾಗಿ ನಗರ ರಾಜಕಾರಣದಲ್ಲಿ ಚಟುವಟಿಕೆ ಹೆಚ್ಚಾಗಿದ್ದು, ರಾಜಕೀಯ ಪಕ್ಷಗಳು ಹಾಗೂ ಆಕಾಂಕ್ಷಿಗಳು ಈಗಿನಿಂದಲೇ ತಮ್ಮ ತಂತ್ರಗಳನ್ನು ರೂಪಿಸಿಕೊಳ್ಳಲು ಆರಂಭಿಸಿದ್ದಾರೆ. ಹಲವು ವಾರ್ಡ್‌ಗಳಲ್ಲಿ ಮೀಸಲಾತಿ ಬದಲಾಗಿರುವುದರಿಂದ, ಈಗಿನ ಸದಸ್ಯರು ಮತ್ತು ಹೊಸ ಮುಖಗಳ ನಡುವೆ ಸ್ಪರ್ಧೆ ತೀವ್ರವಾಗುವ ಸಾಧ್ಯತೆ ಇದೆ.
ಬೆಂಗಳೂರಿನ 5 ಪಾಲಿಕೆಗಳ 369 ವಾರ್ಡ್ ಗಳ ಮೀಸಲಾತಿ ಪ್ರಕಟ
ಬೆಂಗಳೂರು ದಕ್ಷಿಣ ಪಾಲಿಕೆ
- ಒಟ್ಟು ವಾರ್ಡ್ ಗಳು 72 ಗಳು
- ಎಸ್ ಸಿ ಮೀಸಲಾತಿ 7 ವಾರ್ಡ್
- ಎಸ್ ಟಿ 1
- ಹಿಂದುಳಿದ ಅ ವರ್ಗ 19
- ಹಿಂದುಳಿದ ಬ ವರ್ಗ 5
- ಸಾಮಾನ್ಯ 20
- ಶೇ.50% ಮಹಿಳೆಯರಿಗೆ ಮೀಸಲಾತಿ
ಬೆಂಗಳೂರು ಉತ್ತರ ಪಾಲಿಕೆ
- ಒಟ್ಟು ವಾರ್ಡ್ ಗಳು 72
- ಎಸ್ ಸಿ ಮೀಸಲಾತಿ 9
- ಎಸ್ ಟಿ 2
- ಹಿಂದುಳಿದ ಅ ವರ್ಗ 19
- ಹಿಂದುಳಿದ ಬ ವರ್ಗ 5
- ಸಾಮಾನ್ಯ 5
ಬೆಂಗಳೂರು ಪಶ್ಚಿಮ ನಗರ ಪಾಲಿಕೆ
- ಒಟ್ಟು ವಾರ್ಡ್ ಗಳು 112,
- ಎಸ್ ಸಿ ಮೀಸಲಾತಿ 9
- ಎಸ್ ಟಿ 2
- ಹಿಂದುಳಿದ ಅ ವರ್ಗ 30
- ಹಿಂದುಳಿದ ಬ ವರ್ಗ
- ಸಾಮಾನ್ಯ 64
ಬೆಂಗಳೂರು ಕೇಂದ್ರ ನಗರ ಪಾಲಿಕೆ
- ಒಟ್ಟು ವಾರ್ಡ್ ಗಳ 63
- ಎಸ್ ಸಿ ಮೀಸಲಾತಿ 1
- ಎಸ್ ಟಿ 1
- ಹಿಂದುಳಿದ ಅ ವರ್ಗ 15
- ಹಿಂದುಳಿದ ಬ ವರ್ಗ 4
- ಸಾಮಾನ್ಯ 32
ಬೆಂಗಳೂರು ಪೂರ್ವ ನಗರ ಪಾಲಿಕೆ
- ಒಟ್ಟು ವಾರ್ಡ್ ಗಳ ಸಂಖ್ಯೆ 50
- ಎಸ್ ಸಿ ಮೀಸಲಾತಿ 7
- ಎಸ್ ಟಿ 1
- ಹಿಂದುಳಿದ ಅ ವರ್ಗ 14
- ಹಿಂದುಳಿದ ಬ ವರ್ಗ 3
- ಸಾಮಾನ್ಯ 25
ಪಾರದರ್ಶಕತೆಗೆ ಒತ್ತು!
ಆಕ್ಷೇಪಣೆ ಸಲ್ಲಿಸುವ ಅವಧಿಯಲ್ಲಿ ಮೀಸಲಾತಿಯ ಮಾನದಂಡ, ವರ್ಗೀಕರಣ ಅಥವಾ ಜನಸಂಖ್ಯಾ ಅಂಶಗಳ ಕುರಿತು ಪ್ರಶ್ನೆಗಳಿದ್ದರೆ ದಾಖಲಿಸಲು ಅವಕಾಶ ನೀಡಲಾಗಿದೆ. ಈ ಪ್ರಕ್ರಿಯೆ ಪಾರದರ್ಶಕವಾಗಿರಲಿ ಎಂಬ ಉದ್ದೇಶದಿಂದ ಸಾರ್ವಜನಿಕ ಭಾಗವಹಿಸುವಿಕೆಗೆ ಒತ್ತು ನೀಡಲಾಗಿದೆ ಎಂದು ಜಿಬಿಎ ಅಧಿಕಾರಿಗಳು ಮೂಲಗಳು ತಿಳಿಸಿವೆ.
ಸಂಪೂರ್ಣ ಚಿತ್ರಣದ ಕುರಿತು ಪ್ರಶ್ನೆ!
ರಾಜಕೀಯ ವಲಯದಲ್ಲಿ ಈ ಬೆಳವಣಿಗೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಚುನಾವಣೆ ಶೀಘ್ರ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅಂತಿಮ ಪಟ್ಟಿ ಪ್ರಕಟವಾದ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ ಎನ್ನುತ್ತಿದ್ದಾರೆ. ಆದರೂ, ಮೀಸಲಾತಿ ಕರಡು ಪಟ್ಟಿ ಪ್ರಕಟವಾಗಿರುವುದು ಜಿಬಿಎ ಚುನಾವಣೆಯತ್ತ ದೊಡ್ಡ ಹೆಜ್ಜೆ ಎಂಬುದರಲ್ಲಿ ಅನುಮಾನವೇ ಇಲ್ಲ. ಇನ್ನು ಮುಂದಿನ ದಿನಗಳಲ್ಲಿ ಆಕ್ಷೇಪಣೆಗಳ ಪರಿಶೀಲನೆ, ಅಂತಿಮ ಪಟ್ಟಿ ಪ್ರಕಟಣೆ ಮತ್ತು ಚುನಾವಣಾ ವೇಳಾಪಟ್ಟಿ ಘೋಷಣೆ ಇವೆಲ್ಲವೂ ನಡೆಯಬೇಕಿದ್ದು, ಜನವರಿ ಅಂತ್ಯಕ್ಕೆ ಜಿಬಿಎ ಚುನಾವಣೆಯ ಗಡಿ ಸ್ಪಷ್ಟವಾಗುವ ನಿರೀಕ್ಷೆ ಇದೆ.


