BBMP
Loading ...

Chicken

Greater Bengaluru News9: ಯಾವುದೇ ಹಬ್ಬ ಬರಲಿ ಅಥವಾ ಸ್ನೇಹಿತರು ಹಾಗೂ ಸಂಬಂಧಿಕರು ಅಪರೂಪಕ್ಕೆ ಮನೆ ಬಂದಾಗ ತಕ್ಷಣ ಅವರಿಗಾಗಿ ಸಿದ್ಧಪಡಿಸುವ ಆಹಾರವೆಂದರೆ ಮಾಂಸಾಹಾರ. ಅದರಲ್ಲೂ ಮಾಂಸಾಹಾರಿಗಳಿಗೆ ಚಿಕನ್ ( Chicken ) ತುಂಬಾ ಅಚ್ಚುಮೆಚ್ಚು. ಮನೆಯಲ್ಲಿರುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹೆಚ್ಚಿನ ಜನರು ಚಿಕನ್ ತಿನ್ನಲು ಇಷ್ಟಪಡುತ್ತಾರೆ. ಇನ್ನು ಪ್ರತಿ ಭಾನುವಾರ ಬಂತೆಂದೆರೆ ಸಾಕು ಚಿಕನ್​ ಅಂಗಡಿಗಳಲ್ಲಿ ಜನರು ಕ್ಯೂ ನಿಂತಿರುತ್ತಾರೆ. ಅಂದು ಬಹುತೇಕ ಮನೆಗಳಲ್ಲಿ ಬಗೆಬಗೆಯ ಚಿಕನ್ ಖಾದ್ಯ ತಯಾರಿಸುತ್ತಾರೆ.

ತಾಜಾ ಸಂಗತಿ ಏನೆಂದರೆ, ಚಿಕನ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಪ್ರಸ್ತುತ ಕೋಳಿ ಮಾಂಸದ ಬೆಲೆ ಅನಿರೀಕ್ಷಿತವಾಗಿ ಏರುತ್ತಿದ್ದು, ಮಾಂಸಾಹಾರಿಗಳು ಚಿಂತಿತರಾಗಿದ್ದಾರೆ. ಕಳೆದ ಡಿಸೆಂಬರ್‌ನಿಂದ ಚಿಕನ್ ಬೆಲೆ ನಿರಂತರವಾಗಿ ಏರುತ್ತಿದ್ದು, ಈಗ ದಾಖಲೆ ಬೆಲೆಯತ್ತ ಸಾಗುತ್ತಿದೆ. ಕೇವಲ ಚಿಕನ್​ ಮಾತ್ರವಲ್ಲದೇ, ಕೋಳಿ ಮೊಟ್ಟೆಯ ಬೆಲೆ ಕೂಡ ಭಾರೀ ಏರಿಕೆ ಕಂಡಿದೆ.

ಪ್ರಸ್ತುತ, ಒಂದು ಕೆಜಿ ಕೋಳಿ ಮಾಂಸ ಬೆಲೆ 300 ರೂ. ದಾಟಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ವಿತ್​ ಸ್ಕಿನ್​ ಕೋಳಿ ಮಾಂಸದ ಬೆಲೆ 300 ರೂ. ಇದ್ದರೆ, ವಿತೌಟ್​ ಸ್ಕಿನ್​ ಕೋಳಿ ಮಾಂಸದ ಬೆಲೆ 320 ರೂ. ಇದೆ. ಈ ಋತುವಿನಲ್ಲೇ ದಾಖಲಾದ ಅತ್ಯಧಿಕ ಬೆಲೆ ಇದು ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಮತ್ತೊಂದೆಡೆ, ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದೆ ಮತ್ತು ಉತ್ಪಾದನೆಯು ಬೇಡಿಕೆಗಿಂತ ಕಡಿಮೆಯಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಕೋಳಿ ಮಾಂಸದ ಬೆಲೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಭವಿಷ್ಯ ನುಡಿಯುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಮೊಟ್ಟೆ ಮತ್ತು ಕೋಳಿ ಮಾಂಸದ ಬೆಲೆಗಳು ನಿರಂತರವಾಗಿ ಏರುತ್ತಿದೆ. ಒಂದು ಮೊಟ್ಟೆಯ ಬೆಲೆ 7.50 ರೂ.ಗಳಿಂದ 8 ರೂ.ಗಳವರೆಗೆ ಇದೆ. ಅಲ್ಲದೆ, ಒಂದೇ ವಾರದಲ್ಲಿ ಕೋಳಿ ಮಾಂಸದ ಬೆಲೆ ಪ್ರತಿ ಕೆಜಿಗೆ 50 ರೂ.ಗಳಷ್ಟು ಹೆಚ್ಚಾಗಿದೆ. ಈ ಸ್ಥಿತಿ ಹೀಗೆ ಮುಂದುವರಿದರೆ, ಮುಂದಿನ ಕೆಲವು ದಿನಗಳಲ್ಲಿ 400 ರೂ.ಗಳಿಗೆ ಏರಿಕೆಯಾದರೂ ಅಚ್ಚರಿಪಡಬೇಕಿಲ್ಲ ಎಂದು ಕೋಳಿ ಮಾಂಸದ ಅಂಗಡಿಯ ಮಾಲೀಕರು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *