Greater Bengaluru News9 : ಜಿಬಿಎ ಪಾಲಿಕೆಗಳು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಈ ವರ್ಷವೇ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಹೆಬ್ಬಾಳ ಮೇಲ್ಸೇತುವೆ ಬಳಿ ನೂತನ ಮೇಲ್ಸೇತುವೆ ಉದ್ಘಾಟಿಸಿದ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು.ಹೊಸ ವರ್ಷದ ಸಂಕಲ್ಪದ ಬಗ್ಗೆ ಕೇಳಿದಾಗ, “2026ರ ವರ್ಷ ಶುಭ ಲಗ್ನದಲ್ಲಿ ಆರಂಭವಾಗಿದೆ. 2025ರ ವರ್ಷದಲ್ಲಿ ನಾವು ಉತ್ತಮ ಆಡಳಿತ ನೀಡಿದ್ದೇವೆ. ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ಟೆಕ್ ಸಮ್ಮೇಳನ ಮೂಲಕ ನಾವು ಕರ್ನಾಟಕವನ್ನು ಮುನ್ನಡೆಸಿದ್ದೇವೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ” ಎಂದರು.
“ನೀರಾವರಿ ಇಲಾಖೆಯಲ್ಲಿ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ. ಯುಕೆಪಿ, ತುಂಗಾಭದ್ರ ಯೋಜನೆಯಲ್ಲಿ ನಾವು ಕೈಗೊಂಡ ತೀರ್ಮಾನ, ಮೇಕೆದಾಟು ಯೋಜನೆಯಲ್ಲಿ ನ್ಯಾಯಾಲಯದ ತೀರ್ಮಾನ ಇತಿಹಾಸದ ಪುಟ ಸೇರಿವೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ. ಅವರ ನಂಬಿಕೆ ಉಳಿಸಿಕೊಳ್ಳಲು, ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ” ಎಂದು ಹೇಳಿದರು.
ಹೆಬ್ಬಾಳ ಮೇಲ್ಸೇತುವೆ ಲೂಪ್ ಉದ್ಘಾಟನೆ
“ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನ ಉತ್ತರ ಭಾಗದ ಜನರ ಸುಗಮ ವಾಹನ ಸಂಚಾರಕ್ಕಾಗಿ ಹೆಬ್ಬಾಳ ಮೇಲ್ಸೇತುವೆಯ ಎರಡನೇ ಲೂಪ್ ಅನ್ನು ಇಂದು ಉದ್ಘಾಟನೆ ಮಾಡಿದ್ದೇವೆ. ಈ ಭಾಗದ ಜನರು ಹೆಬ್ಬಾಳ ಮೇಲ್ಸೇತುವೆ ಬಳಿ ಸಂಚಾರ ದಟ್ಟಣೆ ದೂರು ಹೇಳುತ್ತಿದರು. ಹೀಗಾಗಿ ನಾವು ತ್ವರಿತ ಗತಿಯಲ್ಲಿ ಪರಿಹಾರ ಕಂಡು ಹಿಡಿದಿದ್ದೇವೆ. ಆಮೂಲಕ ಸಂಚಾರ ದಟ್ಟಣೆ ನಿವಾರಿಸಿದ್ದೇವೆ” ಎಂದು ತಿಳಿಸಿದರು.
“ನೈಸ್ ಸಂಸ್ಥೆಯ ಕೆಲವು ಕೆಐಎಡಿಬಿ ಜಾಗವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೆವು. ಇದಕ್ಕೆ ಅವರು ತಕರಾರು ಎತ್ತಿದ್ದಾರೆ. ನೈಸ್ ನವರು ತಾವು ಸರ್ಕಾರಕ್ಕಿಂತ ದೊಡ್ಡವರು ಎಂದು ಭಾವಿಸಿದ್ದಾರೆ. ಹೀಗಾಗಿ ಬೇರೆ ದಾರಿ ಹುಡುಕುತ್ತೇವೆ. ಅವರಿಗೆ ಹೇಗೆ ಪಾಠ ಕಲಿಸಬೇಕು ಎಂಬುದು ಗೊತ್ತಿದೆ. ಹೀಗಾಗಿ ಸ್ಕೈಡೆಕ್ ಗಾಗಿ ನಾವು ಬೇರೆ ಕಡೆ ಬಿಡಿಎ ಜಾಗ ಗುರುತಿಸಿದ್ದೇವೆ. ವಿಮಾನ ಹಾರಾಟದ ಟವರ್ ಸಮಸ್ಯೆ ಇರುವ ಕಾರಣ, ಇದನ್ನು ಸೂಕ್ತ ಜಾಗದಲ್ಲಿ ನಿರ್ಮಿಸುತ್ತೇವೆ” ಎಂದರು.


