Greater Bengaluru news9 : ಸಮಾಜಘಾತುಕ ಹಾಗೂ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ್ ಅವರನ್ನು ಅಮಾನತು ಮಾಡಲಾಗಿದೆ.
ಲ್ಯಾಂಡ್ ಗ್ರಾಬಿಂಗ್ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ವ್ಯಕ್ತಿಗಳ ಮನೆಗೆ ತೆರಳಿ ಬರ್ತಡೆ ಆಯೋಜಿಸಿ, ಕೇಕ್ ಕಟ್ ಮಾಡಿ ಸನ್ಮಾನ ಸ್ವೀಕರಿಸಿರುವ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ವಿಷಯ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಸೂಚನೆ ನೀಡಿದ್ದರು. ವರದಿ ಪರಿಶೀಲನೆಯ ಬಳಿಕ ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಪಿಎಸ್ಐ ನಾಗರಾಜ್ ಅವರನ್ನು ಅಮಾನತು ಮಾಡುವ ಆದೇಶ ಹೊರಡಿಸಿದ್ದಾರೆ.
ಪಿಎಸ್ಐ ನಾಗರಾಜ್, ದಾಸ ಎಂಬಾತನೊಂದಿಗೆ ಬರ್ತಡೆ ಆಚರಿಸಿದ್ದಾಗಿ ವರದಿಯಾಗಿದೆ. ದಾಸನ ವಿರುದ್ಧ ಲ್ಯಾಂಡ್ ಗ್ರಾಬಿಂಗ್, ಹಲ್ಲೆ, ಬೆದರಿಕೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿದ್ದು, ರಾಜಾನುಕುಂಟೆ, ಚಿಕ್ಕಜಾಲ, ಯಲಹಂಕ ನ್ಯೂಟೌನ್ ಸೇರಿದಂತೆ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಆತ ಆರೋಪಿಯಾಗಿದ್ದಾನೆ.
ಇಂತಹ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳೊಂದಿಗೆ ಪೊಲೀಸ್ ಅಧಿಕಾರಿಯ ನಿಕಟ ಸಂಪರ್ಕ ಸಾರ್ವಜನಿಕರಲ್ಲಿ ಭಯ ಮತ್ತು ಅನುಮಾನ ಮೂಡಿಸುತ್ತದೆ. ಇದರಿಂದ ಜನರು ಪೊಲೀಸ್ ಠಾಣೆಗೆ ನಿರ್ಭಯವಾಗಿ ಬಂದು ದೂರು ನೀಡಲು ಹಿಂಜರಿಯುವ ಸಾಧ್ಯತೆ ಇದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ವರ್ತನೆ ಪೊಲೀಸ್ ಇಲಾಖೆಯ ಶಿಸ್ತು ಮತ್ತು ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಮುಂದಿನ ದಿನಗಳಲ್ಲಿ ಯಾವುದೇ ಪೊಲೀಸ್ ಅಧಿಕಾರಿಗಳು ಸಮಾಜಘಾತುಕ, ರೌಡಿ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳೊಂದಿಗೆ ಸ್ನೇಹ, ವ್ಯವಹಾರ, ಪಾರ್ಟಿ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಅದನ್ನು ಸಹಿಸುವುದಿಲ್ಲ ಎಂಬ ಕಠಿಣ ಸಂದೇಶವನ್ನು ಬೆಂಗಳೂರು ಪೊಲೀಸ್ ಆಯುಕ್ತರು ಈ ಮೂಲಕ ಇಲಾಖೆಗೆ ರವಾನಿಸಿದ್ದಾರೆ.


