Greater Bengaluru News9 : ಪೊಲೀಸರೇ ಕಳ್ಳತನ ಮತ್ತು ದರೋಡೆಯಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಅಂತಹ ಅಧಿಕಾರಿಗಳನ್ನು ಕೇವಲ ಅಮಾನತ ಮಾಡದೆ, ಸೇವೆಯಿಂದಲೇ ವಜಾ ಮಾಡುವ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಕಳ್ಳತನ ಮತ್ತು ದರೋಡೆಯಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ ಎಂಬ ಶಾಸಕ ಟಿ.ಎ. ಶರವಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದಲೇ ವಜಾ ಮಾಡುವ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದ್ದಾರೆ.
ಸಸ್ಪೆಂಡ್ ಶಿಕ್ಷೆ ಸಾಕಾಗಲ್ಲ; ವಜಾ ಮಾಡುವುದೇ ಮದ್ದು
ಶಾಸಕ ಶರವಣ ಅವರು ಸದನದಲ್ಲಿ ಮಾತನಾಡುತ್ತಾ, “ಇತ್ತೀಚಿನ ದಿನಗಳಲ್ಲಿ ರಕ್ಷಕರೇ ಭಕ್ಷಕರಾಗುತ್ತಿದ್ದಾರೆ. ಸಾರ್ವಜನಿಕರಿಗೆ ಪೊಲೀಸರ ಮೇಲಿರುವ ವಿಶ್ವಾಸ ಕುಸಿಯುತ್ತಿದೆ. ಕೇವಲ ಅಮಾನತು ಮಾಡಿ ಮತ್ತೆ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಪದ್ಧತಿ ಬೇಡ. ಅಂತಹ ಅಧಿಕಾರಿಗಳನ್ನು ಸೇವೆಯಿಂದಲೇ ಶಾಶ್ವತವಾಗಿ ವಜಾ ಮಾಡುವಂತಹ ಕಠಿಣ ಕಾನೂನು ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಗೃಹ ಸಚಿವರು, “ಬಹಳಷ್ಟು ಪ್ರಕರಣಗಳಲ್ಲಿ ಕೇವಲ ಅಮಾನತು ಮಾಡುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಆದ್ದರಿಂದ, ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾದ ತಕ್ಷಣ ಅಂತಹವರನ್ನು ಇಲಾಖೆಯಿಂದಲೇ ವಜಾ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಭ್ರಷ್ಟ ಅಧಿಕಾರಿಗಳಿಗೆ ಇಲಾಖೆಯಲ್ಲಿ ಸ್ಥಾನವಿಲ್ಲ” ಎಂದು ಎಚ್ಚರಿಸಿದರು.
88 ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್
ಕಳೆದ ಮೂರು ವರ್ಷಗಳಲ್ಲಿ ಪೊಲೀಸ್ ಅಧಿಕಾರಿಗಳೇ ಭಾಗಿಯಾದ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಸಚಿವರು, ಈಗಾಗಲೇ 88 ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಎಫ್‌ಐಆರ್ ಹಾಕಲಾಗಿದೆ. ಈ ಪೈಕಿ ಕೆಲವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ವಿವರಿಸಿದರು.
ಇಲಾಖೆಯಲ್ಲಿ 1 ಲಕ್ಷಕ್ಕೂ ಅಧಿಕ ಪ್ರಾಮಾಣಿಕ ಸಿಬ್ಬಂದಿಗಳಿದ್ದಾರೆ, ಆದರೆ ಕೆಲವು ಅಧಿಕಾರಿಗಳ ಇಂತಹ ನಡವಳಿಕೆಯಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಅವರು ವಿಷಾದಿಸಿದರು.
ಇದೆ ವೇಳೆ, ತನಿಖಾ ಹಂತದಲ್ಲಿರುವ ಸಾವಿರಾರು ಪ್ರಕರಣಗಳ ಬಗ್ಗೆ ಶರವಣ ಅವರು ಆತಂಕ ವ್ಯಕ್ತಪಡಿಸಿದರು. 2024ರ ಸಾಲಿನಲ್ಲಿ ಸುಮಾರು 7,459 ಸಾಮಾನ್ಯ ಕಳ್ಳತನದ ಪ್ರಕರಣಗಳು ಇನ್ನೂ ತನಿಖೆಯ ಹಂತದಲ್ಲೇ ಉಳಿದಿವೆ ಎಂಬುದನ್ನು ಸರ್ಕಾರದ ವರದಿಯನ್ನೇ ಉಲ್ಲೇಖಿಸಿ ಪ್ರಶ್ನಿಸಿದರು. “ವರದಿಯಲ್ಲಿ ಇಲ್ಲದಿರುವ ಇನ್ನೂ ಹಲವು ಗಂಭೀರ ಪ್ರಕರಣಗಳ ಪಟ್ಟಿ ನನ್ನಲ್ಲಿದೆ, ಅವುಗಳನ್ನು ಸಾಕ್ಷಿ ಸಮೇತ ನಿಮಗೆ ನೀಡುತ್ತೇನೆ” ಎಂದು ಶರವಣ ಹೇಳಿದರು.


