Greater Bengaluru News9 : ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯ ವೇತನ ಸಹಿತ ಮುಟ್ಟಿನ ರಜೆ ನೀಡುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ತನ್ನ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿತ್ತು. ಹೋಟೆಲ್ ಮಾಲೀಕರ ಸಂಘದ ಪರ ವಕೀಲ ಪ್ರಶಾಂತ್ ಬಿ.ಕೆ. ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದರು.
ಕರ್ನಾಟಕ ಸರ್ಕಾರ ನವೆಂಬರ್ 12 ರಂದು ಹೊರಡಿಸಿದ ಆದೇಶದಲ್ಲಿ, ಕಾರ್ಮಿಕ ಇಲಾಖೆಯು 1948 ರ ಕಾರ್ಖಾನೆ ಕಾಯ್ದೆ, 1961 ರ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, 1951 ರ ಪ್ಲಾಂಟೇಶನ್ ಕಾರ್ಮಿಕ ಕಾಯ್ದೆ, 1966 ರ ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ ಹಾಗೂ 1961 ರ ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆ ವ್ಯಾಪ್ತಿಗೆ ಬರುವ ಎಲ್ಲಾ ಸಂಸ್ಥೆಗಳು ಪ್ರತಿ ತಿಂಗಳು ಮಹಿಳಾ ಉದ್ಯೋಗಿಗಳಿಗೆ ಒಂದು ದಿನ ವೇತನ ಸಹಿತ ಮುಟ್ಟಿನ ರಜೆಯನ್ನು ನೀಡುವಂತೆ ಸೂಚಿಸಲಾಗಿತ್ತು.
ಆದರೆ ಹೋಟೆಲ್ ಮಾಲೀಕರ ಸಂಘವು, ವೈಯಕ್ತಿಕ ಸಂಸ್ಥೆಗಳ ರಜೆ ನೀತಿಗಳು ಆಂತರಿಕ ಆಡಳಿತಾತ್ಮಕ ವಿಷಯವಾಗಿದ್ದು ಸರ್ಕಾರವು ನಿರ್ಬಂಧಿಸಬಾರದು ಎಂದು ವಾದಿಸಿಕೊಂಡಿತ್ತು. ಹೈಕೋರ್ಟ್ನಲ್ಲಿ ವಾದ ಕೇಳಿದ ನ್ಯಾ. ಜ್ಯೋತಿ ಮೂಲಿಮನಿ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದರು.
ನ್ಯಾಯಮೂರ್ತಿಯವರು ಪ್ರಶ್ನಿಸಿದಂತೆ, ಸರ್ಕಾರ ಈ ಆದೇಶ ಹೊರಡಿಸುವ ಮೊದಲು ಸಂಘಟನೆಗಳ ಅಭಿಪ್ರಾಯ ಪಡೆದಿದೆಯೇ ಎಂಬ ಪ್ರಶ್ನೆಗೆ ಹೋಟೆಲ್ ಮಾಲೀಕರ ಸಂಘದ ವಕೀಲರು “ಇಲ್ಲ” ಎಂದು ಉತ್ತರಿಸಿದರು. ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆಯನ್ನು ಮುಂದಿನ ವಿಚಾರಣೆವರೆಗೂ ಜಾರಿಗೆ ತಂದಿದ್ದು, ಸರ್ಕಾರ ಈ ತಡೆಯಾಜ್ಞೆ ವಿರುದ್ಧ ಅರ್ಜಿ ಸಲ್ಲಿಸುವ ಹಕ್ಕನ್ನು ಹೊಂದಿದೆ ಎಂದು ಸೂಚಿಸಲಾಗಿದೆ.


