BBMP
Loading ...

KJ George

Greater Bengaluru News9: ರಾಜ್ಯದಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಸಂಬಂಧಿಸಿದ ಟೆಂಡರ್‌ನಲ್ಲಿ ಅಕ್ರಮ ನಡೆದಿರುವುದಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಕೆ. ಜೆ. ಜಾರ್ಜ್‌ ( KJ George ) ಸೇರಿದಂತೆ ಅಧಿಕಾರಿಗಳ ವಿರುದ್ಧ ಬಿಜೆಪಿ ನಾಯಕರು ದಾಖಲಿಸಿದ್ದ ದೂರನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ. ಇದರಿಂದ ಸಾವಿರಾರೂ ಕೋಟಿ ಅಕ್ರಮದ ಆರೋಪ ಮಾಡಿದ್ದ ಬಿಜೆಪಿ ನಾಯಕರಿಗೆ ಮುಖಭಂಗವಾಗಿದ್ದು, ಸಚಿವ ಜಾರ್ಜ್‌ ನಿರಾಳರಾಗಿದ್ದಾರೆ.

ಸ್ಮಾರ್ಟ್‌ ಮೀಟರ್‌ ಅಳವಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿರುವ ವಿಶೇಷ ನ್ಯಾಯಾಲಯದ ಆದೇಶ ಹಾಗೂ ಖಾಸಗಿ ದೂರನ್ನು ಪ್ರಶ್ನಿಸಿ ಕೆ. ಜೆ. ಜಾರ್ಜ್‌ ಮತ್ತು ಈ ಹಿಂದೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ದಿ. ಮಹಾಂತೇಶ್‌ ಬೀಳಗಿ ಹಾಗೂ ತಾಂತ್ರಿಕ ವಿಭಾಗದ ನಿರ್ದೇಶಕ ಎಚ್‌.ಜೆ.ರಮೇಶ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ಐ. ಅರುಣ್‌ ಅವರ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

“ಕ್ರಿಮಿನಲ್‌ ಅರ್ಜಿಗಳನ್ನು ಪುರಸ್ಕರಿಸಲಾಗಿದ್ದು, ವಿಚಾರಣಾಧೀನ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕ್ರಿಯೆಯನ್ನು ವಜಾಗೊಳಿಸಲಾಗಿದೆ. ಮೂರನೇ ಪ್ರತಿವಾದಿಯಾಗಿದ್ದ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಅವರ ವಿರುದ್ಧದ ಪ್ರಕರಣ ಕೈಬಿಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಸಿ. ವಿ. ನಾಗೇಶ್‌ ಸಾರ್ವಜನಿಕ ಸೇವಕರಿಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 17A ಅಡಿ ರಕ್ಷಣೆ ಇರುತ್ತದೆ. ಈ ಆಕ್ಷೇಪಾರ್ಹವಾದ ಆದೇಶವನ್ನು ಮಾಡುವಂತೆಯೇ ಇಲ್ಲ. ಆದರೆ, ಐಪಿಸಿ ಕಾಯಿದೆ ಸೆಕ್ಷನ್‌ 17A ಅಡಿ ಪೂರ್ವಾನುಮತಿ ಇಲ್ಲದೇ ಸಾರ್ವಜನಿಕ ಸೇವಕ ವಿರುದ್ಧ ಯಾವುದೇ ಪೊಲೀಸ್‌ ಅಧಿಕಾರಿ ತನಿಖೆ ನಡೆಸುವಂತಿಲ್ಲ ಎಂದು ಕಾಯಿದೆ ಹೇಳುತ್ತದೆ. ಇಲ್ಲಿ ವಿಚಾರಣಾಧೀನ ನ್ಯಾಯಾಲಯವು ಅವಕಾಶ ಇಲ್ಲದಿದ್ದರೂ ವರದಿ ಕೇಳಿದೆ” ಎಂದಿದ್ದರು.

ದೂರುದಾರರಾದ ಬಿಜೆಪಿ ನಾಯಕರ ಪರ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್‌ ಅವರು “ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ವರದಿ ನೀಡಿದ ಬಳಿಕ ಮ್ಯಾಜಿಸ್ಟ್ರೇಟ್‌ ಅವರು ಮೇಲಿನ ಶ್ರೇಣಿಯ ಅಧಿಕಾರಿಗಳಿಂದ ವರದಿ ಕೇಳುತ್ತಾರೆ. ಇಲ್ಲಿ ವಿಚಾರಣಾಧೀನ ನ್ಯಾಯಾಲಯವು ವರದಿ ನೀಡುವಂತೆ ಆದೇಶಿಸಿದೆಯಷ್ಟೇ. ಇದು ಇನ್ನೂ ಪ್ರಾಥಮಿಕ ಹಂತದ ಪ್ರಕ್ರಿಯೆಯಾಗಿದೆ. ಹೀಗಾಗಿ, ತಡೆ ನೀಡಬಾರದು” ಎಂದಿದ್ದರು.

ಲೋಕಾಯುಕ್ತ ಪರ ವಕೀಲ ವೆಂಕಟೇಶ್‌ ಅರಬಟ್ಟಿ “ದೇಶದಲ್ಲಿ 97ಕ್ಕೂ ಹೆಚ್ಚು ಅರ್ಹ ಟೆಂಡರ್‌ದಾರರು ಸ್ಮಾರ್ಟ್​ ಮೀಟರ್‌ ಅಳವಡಿಕೆ ಕೆಲಸ ಮಾಡುತ್ತಾರೆ. ಇವರೆಲ್ಲರೂ ಬೇರೆಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಾರೆ. ಅವರೂ ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದರು. ಇದರ ಸಂಬಂಧಿತ ಮಾಹಿತಿಯು ಬೆಸ್ಕಾಂ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಇದರಲ್ಲಿ ಮುಚ್ಚುಮರೆ ಏನೂ ಇಲ್ಲ ಐವರು ಟೆಂಡರ್‌ದಾರರ ಜೊತೆ ಚರ್ಚೆ ನಡೆದಿದ್ದು ಪುನರ್‌ ಬಿಡ್‌ ಸಹ ಐವರ ನಡುವೆ ನಡೆದಿದೆ. ಎಲ್ಲರೂ ಕರ್ನಾಟಕದವರೇ ಆಗಿದ್ದು ಈ ಪೈಕಿ ಟೆಂಡರ್‌ನ ಐದು ಷರತ್ತುಗಳನ್ನು ಪೂರೈಸಲು ಮೂವರು ಬಿಡ್‌ದಾರರು ವಿಫಲವಾದ್ದರಿಂದ ಅನರ್ಹರಾಗಿದ್ದರು” ಎಂದು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ಹಿನ್ನೆಲೆ
ರಾಜ್ಯದಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಸಂಬಂಧಿಸಿದ ಟೆಂಡರ್‌ ಕಾನೂನುಬಾಹಿರವಾಗಿದೆ ಮತ್ತು ಈ ಟೆಂಡರ್‌ ನೀಡಿಕೆಯಿಂದ ಅಂದಾಜು 16 ಸಾವಿರ ಕೋಟಿ ಮೊತ್ತದ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿಯ ಶಾಸಕರಾದ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಎಸ್‌.ಆರ್‌. ವಿಶ್ವನಾಥ್ ಮತ್ತು ಧೀರಜ್‌ ಮುನಿರಾಜು ಅವರು ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಸ್ಮಾರ್ಟ್‌ ಮೀಟರ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 26ರಂದು ಟೆಂಡರ್‌ ಕರೆಯಲಾಗಿತ್ತು. ಬಿಡ್‌ದಾರರಾದ ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಎಂಬ ಶೆಲ್‌ ಕಂಪನಿಗೆ ಟೆಂಡರ್‌ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಮುಂದುವರೆದು, ಈ ಟೆಂಡರ್‌ನ್ನು ರಾಜ್ಯದಲ್ಲಿ ವಿವಿಧ ಭಾಗಗಳ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಪ್ರತ್ಯೇಕ ಟೆಂಡರ್‌ ಕರೆಯದೆ ಬೆಸ್ಕಾಂ ಕಂಪನಿ ಮೂಲಕವೇ ನೇರವಾಗಿ ಟೆಂಡರ್‌ ನೀಡಲಾಗಿದೆ. ಇದರಿಂದ ಅಂದಾಜು 16 ಸಾವಿರ ಕೋಟಿ ಮೊತ್ತದ ಅಕ್ರಮ ನಡೆದಿದ್ದು, ಈ ಪ್ರಕ್ರಿಯೆ ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಅಧಿನಿಯಮ-2000 ಹಾಗೂ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ.

ಸಚಿವ ಕೆ ಜೆ ಜಾರ್ಜ್‌, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಬೆಸ್ಕಾಂ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಬೆಸ್ಕಾಂನ ತಾಂತ್ರಿಕ ನಿರ್ದೇಶಕ ಎಚ್‌. ಜೆ. ರಮೇಶ್‌ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಇದನ್ನು ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಖಾಸಗಿ ದೂರು ದಾಖಲಿಸಿಕೊಂಡು, ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗೆ ವರದಿ ನೀಡಲು ಆದೇಶಿಸಿತ್ತು.

Leave a Reply

Your email address will not be published. Required fields are marked *