Greater Bengaluru News9 : ನವೆಂಬರ್ ತಿಂಗಳು ಮುಗಿಯುತ್ತಿದ್ದಂತೆ ನವೆಂಬರ್ ಕ್ರಾಂತಿಯೂ ತನ್ನ ಶಕ್ತಿ ಕಳೆದುಕೊಂಡಿದೆ. ʼಪವರ್ʼಗಾಗಿ ನಡೆದ ʼಪವರ್ ಫುಲ್ ಕ್ರಾಂತಿʼ ಇದೀಗ ʼಪವರ್ ಲೆಸ್ʼ ಆಗಿದೆ. ಅಧಿಕಾರ ಹಸ್ತಾಂತರ ವಿಚಾರದಲ್ಲಿ ಕಳೆದ ಕೆಲವು ವಾರಗಳಿಂದ ನಡೆಯುತ್ತಿದ್ದ ಕಾದಾಟ-ಗುದ್ದಾಟಕ್ಕೆ ಸದ್ಯ ಅಲ್ಪವಿರಾಮ ಬಿದ್ದು, ಸಿದ್ದರಾಮಯ್ಯ ತುಸು ನಿರಾಳರಾದಂತಾಗಿದೆ.
ಯಾಕೆಂದರೆ ಇನ್ನು ಕನಿಷ್ಠ ಆರು ತಿಂಗಳು ಅವರ ಕುರ್ಚಿ ಅಲ್ಲಾಡದು
ಶುಕ್ರವಾರ ಬೆಳಗ್ಗೆ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಡ್ಲಿ- ಸಾಂಬಾರ್, ಉಪ್ಮಾ ತಿನ್ನುವುದರೊಂದಿಗೆ ಸದ್ಯ ಕಾಂಗ್ರೆಸ್ ಪಾಳಯದ ಪ್ರಹಸನಕ್ಕೆ ತಡೆ ಬಿದ್ದಿದೆ. ಉಪಹಾರ ಸಭೆ ಮುಗಿಯುತ್ತಿದ್ದಂತೆ ಇಬ್ಬರೂ ಜಂಟಿ ಸುದ್ದಿಗೋಷ್ಠಿ ನಡೆಸಿ ಒಗ್ಗಟ್ಟಿನ ಮಂತ್ರ ಜಪಿಸಿದರು.
ಒಗ್ಗಟ್ಟು ಮೂಡಿಸಿತಾ ಉಪ್ಪಿಟ್ಟು?
ಶುಕ್ರವಾರ ಸಂಜೆಯವರೆಗೆ ಕರ್ನಾಟಕ ರಾಜಕೀಯದ ಬೆಳವಣಿಗೆ ಕಂಡವರಿಗೆ ಕೆಲವೇ ದಿನಗಳಲ್ಲಿ ಏನೋ ಒಂದು ಆಗುತ್ತದೆ ಎಂಬಂತಿತ್ತು. ಆದರೆ ಈಗ ಎಲ್ಲವೂ ಬದಲಾವಣೆಯಾಗಿದೆ. ಈ ಬಾರಿ ಸಿಎಂ ಕುರ್ಚಿಯಲ್ಲಿ ಕುಳಿತೇ ಸೈ ಎಂದಿದ್ದ ಬಂಡೆ ಈಗ ಮೆತ್ತಾಗಾಗಿದೆ! ಸಿದ್ದರಾಮಯ್ಯ ಮತ್ತೆ ಪಂಚೆ ಎತ್ತಿ ಕಟ್ಟಿ ʼಚುನಾವಣೆʼ ಸುದ್ದಿ ಎತ್ತಿದ್ದಾರೆ. ಬೀಸುವ ಕತ್ತಿಯಿಂದ ಅವರು ಪಾರಾಗಿದ್ದಾರೆ.
ಸದ್ಯ ಅಧಿಕಾರ ಹಸ್ತಾಂತರಕ್ಕೆ ಪ್ರಶಸ್ತ ಸಮಯವಲ್ಲ ಎಂದು ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಿಲ್ಲದೆ, ಯಾರಿಗೂ ನೋವಾಗದಂತೆ ಅಧಿಕಾರ ಹಸ್ತಾಂತರ ಮಾಡಲು ಹೈಕಮಾಂಡ್ ಯೋಚಿಸಿದೆ. ಯಾಕೆಂದರೆ ಇದು ಬೆಣ್ಣೆಯಿಂದ ಕೂದಲು ತೆಗೆದಂತೆ ಮಾಡಬೇಕಾದ ಕೆಲಸ.
ಇಂದು ಸುದ್ದಿಗೋಷ್ಠಿಯಲ್ಲಿ ಮುಂದಿನ ತಿಂಗಳು ಅಧಿವೇಶನ ಸೂಕ್ತವಾಗಿ ನಡೆಯಬೇಕಾದ ಕಾರಣ ಒಟ್ಟಿಗೆ ತೆರಳಬೇಕು ಎಂದು ಡಿಕೆಶಿ ಮತ್ತು ಸಿದ್ದರಾಮಯ್ಯ ಹೇಳಿದರು. ಆದರೆ ವಿಶ್ಲೇಷಕರ ಪ್ರಕಾರ 2026ರ ಏಪ್ರಿಲ್- ಮೇ ತಿಂಗಳಿನಲ್ಲಿ ಈ ಪ್ರಕ್ರಿಯೆ ನಡೆಯಬಹುದು. ಡಿಸೆಂಬರ್ ಅಧಿವೇಶನದ ಬಳಿಕ ಬಜೆಟ್ ಪ್ರಕ್ರಿಯೆ ಆರಂಭವಾಗುತ್ತದೆ. ಇಂದು ಮಾತಿನ ವೇಳೆ ಸಿದ್ದರಾಮಯ್ಯ ಅವರು ಸ್ಥಳೀಯ ಸಂಸ್ಥೆ ಚುನಾವಣೆಯ ವಿಚಾರ ಒತ್ತಿ ಹೇಳಿದ್ದು, ಈ ಮೂಲಕ ಮುಂದಿನ ಏಪ್ರಿಲ್ – ಮೇ ವರೆಗೆ ತನ್ನ ಕುರ್ಚಿಗೆ ಫೆವಿಕಾಲ್ ಹಾಕಿದ್ದಾರೆ.
ಅಂದಹಾಗೆ ಸದ್ಯ ಡಿಕೆ ಶಿವಕುಮಾರ್ ಅವರು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಅಲ್ಲದೆ ಮುಂದಿನ ಸಂಪುಟ ಪುನಾರಚನೆಯಲ್ಲಿ ಹೆಚ್ಚಿನ ಸಚಿವ ಸಂಪುಟ ಖಾತೆಗಳು ಶಿವಕುಮಾರ್ ಅವರ ನಿಷ್ಠಾವಂತರಿಗೆ ಹೋಗುತ್ತವೆ, 2028 ರಲ್ಲಿ ಚುನಾವಣೆ ಬಂದಾಗ ಸಿದ್ದರಾಮಯ್ಯ ಅವರು ಶಿವಕುಮಾರ್ ಅವರ ನಾಯಕತ್ವವನ್ನು ಬೆಂಬಲಿಸುವ ನಿರೀಕ್ಷೆಯಿದೆ.
ಸದ್ಯ ಸಿದ್ದರಾಮಯ್ಯನವರಿಗೆ ಶಾಸಕರ ಬಲವಿದೆ, ಅಹಿಂದ ವರ್ಗದ ಪ್ರಬಲ ನಾಯಕನನ್ನು ಎದುರು ಹಾಕಿಕೊಂಡು ಅಧಿಕಾರ ಸೂತ್ರ ಪಡೆಯುವ ದುಸ್ಸಾಹಸ ಮಾಡಬಾರದು ಎಂಬ ವಿಚಾರವೂ ಡಿಕೆಶಿಗೆ ತಿಳಿಯದೇ ಇರುವುದೇನಲ್ಲ. ಒಟ್ಟಿನಲ್ಲಿ ರಾಜದಂಡ ಹಿಡಿಯುವ ಡಿಕೆಶಿ ಕನಸು ಸದ್ಯಕ್ಕೆ ಮುಂದೂಡಿಕೆಯಾಗಿದೆ.


