Greater Bengaluru News9 : ನೀರಿನ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಗ್ರಾಹಕರು ನೀರಿನ ಬಾಕಿ ಅಸಲು ಮೊತ್ತವನ್ನು ಒಂದೇ ಬಾರಿ ಪಾವತಿಸಿದರೆ, ಅದರ ಮೇಲೆ ವಿಧಿಸಿರುವ ಬಡ್ಡಿ, ದಂಡ ಹಾಗೂ ಇತರ ಎಲ್ಲಾ ಶುಲ್ಕಗಳನ್ನು ಶೇಕಡಾ 100ರಷ್ಟು ಮನ್ನಾ ಮಾಡುವ ಏಕಕಾಲಿಕ ತೀರುವಳಿ (One Time Settlement – OTS) ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮೂರು ತಿಂಗಳ ಅವಧಿಗೆ ಈ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. Bengaluru Water Supply Regulations, 1965 ನಿಯಮಗಳಲ್ಲಿ ಸಡಿಲಿಕೆ ಮಾಡಿ ಯೋಜನೆ ಜಾರಿಗೆ ಸರ್ಕಾರ ಅನುಮತಿ ನೀಡಿರುವುದಾಗಿ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಫೆಬ್ರವರಿ 2025ರ ವರೆಗೆ ಗ್ರಾಹಕರಿಂದ ಪಾವತಿಯಾಗದೇ ಉಳಿದಿರುವ ನೀರಿನ ಬಿಲ್ ಮೊತ್ತ ಒಟ್ಟು ₹701.71 ಕೋಟಿ, ಇದರಲ್ಲಿ ಅಸಲು ₹439.03 ಕೋಟಿ ಮತ್ತು ಬಡ್ಡಿ ₹262.68 ಕೋಟಿ ಎಂದು ಸರ್ಕಾರ ಗಣನೆ ಮಾಡಿದೆ.
ಮೂರು ತಿಂಗಳ ಅವಧಿಯೊಳಗೆ OTS ಯೋಜನೆಯಿಂದ ಅಸಲು ಬಾಕಿ ಮೊತ್ತವನ್ನು ವಸೂಲಿ ಮಾಡಿದರೆ, BWSSBಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣವಾಗುವುದರ ಜೊತೆಗೆ, ಗ್ರಾಹಕರು ಹೆಚ್ಚಿನ ಬಡ್ಡಿ ಪಾವತಿಯಿಂದ ವಿನಾಯಿತಿ ಪಡೆಯುವ ನಿರೀಕ್ಷೆ ವ್ಯಕ್ತವಾಗಿದೆ.


