Greater Bengaluru News9 : ರೂಲ್ಸ್ ಅಂದ್ರೆ ರೂಲ್ಸ್ ದೇಶದ ಪ್ರತಿ ಪ್ರಜೆಗೂ ಒಂದೇ ನಿಯಮ. ಮುಖ್ಯಮಂತ್ರಿ ಆಗ್ಲಿ ಮಿನಿಸ್ಟರ್ ಆಗಲಿ ಎಲ್ಲರೂ ಕೂಡ ರೂಲ್ಸ್ ಫಾಲೋ ಮಾಡಲೇಬೇಕಿದೆ. ಯಾಕೆ ಈ ಪೀಠಿಕೆ ಅಂದ್ರೆ, ಮೈಸೂರಿನ ಕುವೆಂಪು ನಗರದಲ್ಲಿ ನಿರ್ಮಾಣಗೊಂಡಿರುವ ಸಿದ್ದರಾಮಯ್ಯ ಅವರ ನೂತನ ನಿವಾಸಕ್ಕೆ ಇನ್ನು ಪವರ್ ಕನೆಕ್ಷನ್ ಸಿಕ್ಕಿಲ್ಲ. ಕಾರಣ ಏನು ಗೊತ್ತಾ? ಇಂಧನ ಇಲಾಖೆಯಲ್ಲಿ ಹೊಸದಾಗಿ ತಂದಿರುವ ನಿಯಮವೇ ಆಗಿದೆ? ಸಿಎಂ ಸಿದ್ದುಗೆ ವಿದ್ಯುತ್ ಸಂಪರ್ಕ ಸಿಗದೇ ಇರುವಾಗ ಸಾಮಾನ್ಯರ ಗತಿ ಏನು ಎಂಬ ಪ್ರಶ್ನೆ ಮೂಡಿದೆ.
ಮೈಸೂರಿನ ಕುವೆಂಪು ನಗರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೂತನ ನಿವಾಸ ತಲೆಎತ್ತಿದೆ. 80*120 ವಿಸ್ತೀರ್ಣದಲ್ಲಿ ಮನೆಯನ್ನ ನಿರ್ಮಿಸಲಾಗಿದೆ. ಇತ್ತೀಚಿಗಷ್ಟೇ ಸಿದ್ದರಾಮಯ್ಯ ಅವರು ನಿರ್ಮಾಣ ಹಂತದ ಮನೆಗೆ ಭೇಟಿ ನೀಡಿದ್ರು. ಶೀಘ್ರದಲ್ಲೇ ಗೃಹ ಪ್ರವೇಶ ಮಾಡೋದಾಗಿಯೂ ಹೇಳಿದ್ರು. ಆದ್ರೆ ಸಿಎಂ ಮನೆಗೆ ಇನ್ನು ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಏಕೆಂದರೆ, ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಹೊಸ ನಿಯಮಗಳು ಜಾರಿಯಾಗಿರುವ ಹಿನ್ನೆಲೆ ಸಿಎಂ ಮನೆಗೆ ಪವರ್ ಕನೆಕ್ಷನ್ ಸಿಗುವುದು ಕೂಡ ತಡವಾಗ್ತಿದೆ. ವಿದ್ಯುತ್ ಸಂಪರ್ಕ ಪಡೆಯಬೇಕು ಅಂದ್ರೆ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪ್ರಮಾಣ ಪತ್ರ, (ಒಸಿ) ಕಡ್ಡಾಯ ಮಾಡಿದೆ. ಮೈಸೂರಿನಲ್ಲಿರೋ ಸಿಎಂ ಮನೆಗೂ ಓಸಿ ಇಲ್ಲದ ಕಾರಣ ಇನ್ನೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ.
ನಿವೇಶನ ಅಥವಾ ಕಟ್ಟಡ ವಿಸ್ತೀರ್ಣ ಪರಿಗಣಿಸದೆ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ಒಂದೇ ಬಾರಿ ವಿದ್ಯುತ್ ಸಂಪರ್ಕ ನೀಡಲು ಇಂಧನ ಇಲಾಖೆ ಒಲವು ತೋರಿದೆ. ಈಗಾಗಲೇ ಇದೇ ಮಾದರಿಯಲ್ಲಿ ಸಾವಿರಾರು ಅರ್ಜಿಗಳು ಬಂದಿದೆ. ಹೀಗಾಗಿ ಸೂಕ್ತ ದಂಡ ಹಾಕಿ ಸಂಪರ್ಕ ನೀಡಲು ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗ್ತಿದೆ. ಇನ್ನು 30×40 (1,200 ಚದರಡಿ) ಹಾಗೂ ಅದಕ್ಕಿಂತ ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ ಒಸಿ ಹಾಗೂ ಸಿಸಿ ಅಗತ್ಯವಿರುವುದಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ, 1200 ಚದರಡಿಗಿಂತ ಹೆಚ್ಚಿರುವ ನಿವೇಶನಗಳಿಗೆ ಕಡ್ಡಾಯ ನಿಯಮ ಮುಂದುವರಿಯಲಿದೆ. ಹೀಗಾಗಿ, ವಿದ್ಯುತ್ ಸಂಪರ್ಕ ಗೊಂದಲ ಮುಂದುವರಿದೆ. ಈ ವಿಚಾರವಾಗಿ ವಿದ್ಯುತ್ ಗುತ್ತಿಗೆದಾರರ ಸಂಘ ಹೋರಾಟ ಮಾಡಿ ವಿನಾಯಿತಿ ಪಡೆಯುವುವಲ್ಲಿ ಯಶಸ್ಸು ಸಾಧಿಸಿತು. ವಿನಾಯಿತಿ ಏನೋ ಸಿಕ್ಕಿದೆ. ಆದರೆ, ಗೊಂದಲ ಮಾತ್ರ ಹಾಗೇ ಮುಂದುವರಿದೆ. ಸಿಎಂ ಮನೆಗೆ ವಿದ್ಯುತ್ ಸಂಪರ್ಕ ಸಿಗದೇ ಇರುವ ಸಂದರ್ಭದಲ್ಲಿ ಜನ ಸಾಮಾನ್ಯರ ಗತಿ ಏನು ಎಂಬ ಪ್ರಶ್ನೆ ಕಾಡದೇ ಇರದು.
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ನಕ್ಷೆ ಅನುಮೋದನೆ ಹಾಗೂ ಓಸಿ ಕಡ್ಡಾಯ ಹಿನ್ನಲೆ ಸಿಎಂ ಸಿದ್ದರಾಮಯ್ಯ ಮನೆಗೂ ಬಿಸಿ ತಟ್ಟಿದೆ. ಮುಖ್ಯಮಂತ್ರಿಗಳ ಕಥೆಯೇ ಹೀಗಾದ್ರೆ, ಇನ್ನು ಹೊಸದಾಗಿ ಮನೆ ಕಟ್ಟುತ್ತಿರುವ ಸಾಮಾನ್ಯರ ಪಾಡೇನು ಅಂತ ಜನರು ಕೇಳ್ತಿದ್ದಾರೆ.
ಒಸಿ ವಿನಾಯಿತಿ ವ್ಯಾಪ್ತಿ
* 1,200 ಚ.ಅಡಿ ವಿಸ್ತೀರ್ಣ ಮೀರದಂತಹ ನಿವೇಶನಗಳಲ್ಲಿ ನೆಲ ಪ್ಲೆಸ್ 2 ಅಂತಸ್ತು ಅಥವಾ ಸ್ಟಿಲ್ಟ್ ಪ್ಲೆಸ್ 3 ಅಂತಸ್ತು ಕಟ್ಟಡ
* ಜಿಬಿಎ ಕಾಯ್ದೆಯಲ್ಲಿ ವಿನಾಯಿತಿ ಇದೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಸ್ತರಿಸಲು ಮಾದರಿ ಕಟ್ಟಡ ಬೈಲಾಗೆ ತಿದ್ದುಪಡಿ ತರುವ ಸಾಧ್ಯತೆ
* ರಾಜ್ಯದಲ್ಲಿ 61 ನಗರಸಭೆ, 123 ಪುರಸಭೆ ,117 ಪಟ್ಟಣ ಪಂಚಾಯಿತಿಗಳಿದ್ದು, ವಿನಾಯಿತಿ ನಿಯಮ ಜಾರಿಯಾದರೆ ಲಕ್ಷಾಂತರ ಜನರಿಗೂ ಅನುಕೂಲ


