Greater Bengaluru news9: ಶತಾಯುಷಿ, 114 ವರ್ಷದ ಸಾಲುಮರದ ತಿಮ್ಮಕ್ಕ ಅಸ್ತಂಗತರಾಗಿದ್ದಾರೆ. ಕರ್ನಾಟಕ ರಾಜ್ಯದುದ್ದಕ್ಕೂ ಸೇರಿದಂತೆ ಭಾರತ ದೇಶದಲ್ಲಿಯೇ ಅವರಿಗೆ ಅಭಿಮಾನಿಗಳಿದ್ದಾರೆ. ಅವರನ್ನು ಪ್ರೀತಿಸುವವರು ಸಹಸ್ರಾರು ಸಂಖ್ಯೆಯಲ್ಲಿದ್ದಾರೆ. ನಿನ್ನೆ ಅವರು ನಿಧನರಾದ ನಂತರ ಸಂತಾಪ ಸೂಚಿಸಿದ ಸರ್ಕಾರ ಸಕಲ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.
ಜ್ಞಾನ ಭಾರತಿಯ ಕಲಾಗ್ರಾಮದ ಆವರಣದಲ್ಲಿ ಡಾ.ಸಿದ್ದಲಿಂಗಯ್ಯ ಅವರ ಸಮಾಧಿ ಪಕ್ಕದಲ್ಲೇ ತಿಮ್ಮಕ್ಕ ಅವರ ಅಂತ್ಯಕ್ರಿಯೆ ನಡೆದಿದೆ. ಅವರ ದತ್ತು ಪುತ್ರ ಅಂತ್ಯಕ್ರಿಯೆ ವಿಧಿ ವಿಧಾನಗಳನ್ನ ನೆರವೇರಿಸಿದ್ದಾರೆ. ಕುಶಾಲ ತೋಪು ಸಿಡಿಸಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯ್ತು. ಪೊಲೀಸರು 3 ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಿದರು. ತಿಮ್ಮಕ್ಕನವರ ಪುತ್ರ ಉಮೇಶ್ಗೆ ಗೃಹಸಚಿವ ಡಾ.ಪರಮೇಶ್ವರ್ ತ್ರಿವರ್ಣ ಧ್ವಜ ಹಸ್ತಾಂತರ ಮಾಡಿದರು.
ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ನಿಧನರಾಗಿದ್ದಾರೆ. 114 ವರ್ಷದ ತಿಮ್ಮಕ್ಕ ವಯೋಸಹಜ ಅನಾರೋಗ್ಯದಿಂದ ಇಹಲೋಕವನ್ನ ತ್ಯಜಿಸಿದ್ದಾರೆ. ಇಡೀ ನಾಡು ವೃಕ್ಷಮಾತೆಯ ಅಗಲಿಕೆಗೆ ಕಂಬನಿ ಮಿಡಿದಿದೆ. ಮತ್ತೆ ಕರುನಾಡಿನಲ್ಲಿ ಹುಟ್ಟಿ ಬಾ ತಿಮ್ಮಕ್ಕ ಅಂತ ಪ್ರಾರ್ಥಿಸಿದೆ.


