Greater Bengaluru news 9 : ಬಿಹಾರ ವಿಧಾನಸಭೆ ಚುನಾವಣೆಯ ಸ್ಪಷ್ಟ ಫಲಿತಾಂಶ ಬಹುತೇಕ ಪ್ರಕಟವಾದಂತಿದೆ. ಎನ್ಡಿಎ ಒಕ್ಕೂಟವು 243 ಸ್ಥಾನಗಳ ಪೈಕಿ 203 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ಗೆ ಭಾರೀ ಮುಖಭಂಗ ಉಂಟಾಗಿದೆ. ಮಹಾಘಟಬಂಧನ್ ಕೇವಲ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸರ್ಕಾರ ರಚನೆಗೆ ಅಗತ್ಯವಿರುವ 122 ಮ್ಯಾಜಿಕ್ ನಂಬರ್ನ್ನು ಎನ್ಡಿಎ ಸುಲಭವಾಗಿ ದಾಟಿದಂತಾಗಿದ್ದು, ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ.
ಮಹಾಘಟಬಂಧನ್ ಸೋಲಿಗೆ 9 ಪ್ರಮುಖ ಕಾರಣಗಳು
- ದುರ್ಬಲ ಕಾಂಗ್ರೆಸ್ಗೆ 61 ಸ್ಥಾನ ಹಂಚಿಕೆ
ಮಹಾಘಟಬಂಧನ್ನಲ್ಲಿ ಕಾಂಗ್ರೆಸ್ ಬಲಹೀನವಾಗಿದ್ದರೂ, ಆರ್ಜೆಡಿ 61 ಸ್ಥಾನಗಳನ್ನು ಕೊಟ್ಟದ್ದು ಮೈತ್ರಿಗೆ ಭಾರೀ ಹೊಡೆತವಾಯಿತು. ಹಲವೆಡೆ ಕಾಂಗ್ರೆಸ್ ಸ್ಪರ್ಧೆಯಲ್ಲಿ ತೀವ್ರ ಸ್ಪರ್ಧಾತ್ಮಕವಾಗಿರಲಿಲ್ಲ.
- ‘ಪ್ರತಿ ಮನೆಗೊಂದು ಸರ್ಕಾರಿ ಉದ್ಯೋಗ’ ಭರವಸೆ ಫಲಕಾರಿಯಾಗಲಿಲ್ಲ
ವಿಪಕ್ಷದ ಅತ್ಯಂತ ದೊಡ್ಡ ಚುನಾವಣಾ ಭರವಸೆ ಜನರನ್ನು ಸೆಳೆಯಲಿಲ್ಲ. ಸಾಕ್ಷ್ಯಾಧಾರವಿಲ್ಲದ ಭರವಸೆಯಂತೆ ಕಂಡುಬಂದಿತು.
- ಮುಸ್ಲಿಂ ಮತದಾರರ ಅಸಮಾಧಾನ
87 ಕ್ಷೇತ್ರಗಳಲ್ಲಿ ಶೇ.25 ರಷ್ಟು ಮುಸ್ಲಿಂ ಮತಗಳಿದ್ದರೂ, ಆರ್ಜೆಡಿ ಹೆಚ್ಚಿನ ಟಿಕೆಟ್ ಅನ್ನು ಮುಸ್ಲಿಂ ಅಭ್ಯರ್ಥಿಗಳಿಗೆ ನೀಡಲಿಲ್ಲ. ಇದರಿಂದ ಮುಸ್ಲಿಂ ಮತಗಳ ಸಂಪೂರ್ಣ ಒಗ್ಗಟ್ಟು ಮಹಾಘಟಬಂಧನ್ ಕಡೆಗೆ ತಿರುಗಲಿಲ್ಲ.
- ಲಾಲೂ ಕುಟುಂಬದ ಒಳಕಳಹ
ಆರ್ಜೇಡಿಯ ಒಳಕಳಹ, ಲಾಲೂ–ತೇಜಸ್ವಿ–ತೇಜ್ ಪ್ರತಾಪ್ ನಡುವಿನ ಅಸಮಾಧಾನ ಪಕ್ಷದ ಇಮೇಜ್ಗೆ ಹಾನಿ ಮಾಡಿತು. ತೇಜ್ ಪ್ರತಾಪ್ ಜನಶಕ್ತಿ ಜನತಾದಳ ಮೂಲಕ ಸ್ಪರ್ಧಿಸಿ ಆರ್ಜೆಡಿ ಮತಗಳನ್ನು ಕಿತ್ತುಕೊಂಡರು.
- ಪ್ರಶಾಂತ್ ಕಿಶೋರ್ ಮತ್ತು ಜನ ಸುರಾಜ್ ಮತವಿಭಜನೆ
ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಾರ್ಟಿ ಆಡಳಿತ ವಿರೋಧಿ ಮತಗಳನ್ನು ವಿಭಜಿಸಿದರೂ, ಅದು ಮಹಾಘಟಬಂಧನ್ಗೆ ಪ್ರಯೋಜನವಾಗಲಿಲ್ಲ. ಬದಲು ವಿಪಕ್ಷದ ಮತಬ್ಯಾಂಕ್ ಎರಡು ಭಾಗವಾಯಿತು.
- ಓವೈಸಿ ಪಕ್ಷದ ಧ್ರುವೀಕರಣ ಪರಿಣಾಮ
ಕಳೆದ ಚುನಾವಣೆಯಂತೆ ಈ ಬಾರಿ ಕೂಡ ಅಸಾದುದ್ದೀನ್ ಓವೈಸಿ ಅವರ ಪಕ್ಷ ಹಲವು ಕ್ಷೇತ್ರಗಳಲ್ಲಿ ವಿರೋಧ ಮತವನ್ನು ವಿಭಜಿಸಿತು. ಇದರಿಂದ ಆರ್ಜೆಡಿ–ಕಾಂಗ್ರೆಸ್ ಮೈತ್ರಿಗೆ ನೇರ ನಷ್ಟ.
- ತೇಜಸ್ವಿ ಹೊರತುಪಡಿಸಿ ಬಲಿಷ್ಠ ನಾಯಕತ್ವದ ಕೊರತೆ
ಆರ್ಜೆಡಿಯಲ್ಲಿ ತೇಜಸ್ವಿ ಯಾದವ್ ಹೊರತುಪಡಿಸಿ ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರಭಾವ ಹೊಂದಿರುವ ನಾಯಕರು ಕಡಿಮೆ. ಅದೇ ರೀತಿ ಕಾಂಗ್ರೆಸ್ಗೂ ಶಕ್ತಿಶಾಲಿ ನಾಯಕತ್ವದ ಕೊರತೆ.
- ಸಮುದಾಯಾಧಾರಿತ ನಾಯಕರ ಕೊರತೆ
ದಲಿತ, ಓಬಿಸಿ, ಇಬಿಸಿ ಸಮುದಾಯಗಳ ಪ್ರಭಾವಿ ಮುಖಂಡರು ಮಹಾಘಟಬಂಧನ್ನಲ್ಲಿ ಕಮ್ಮಿ. ಇದರಿಂದ ಪ್ರಮುಖ ಸಮುದಾಯಗಳ ಬೆಂಬಲವನ್ನು ಸಾಧಿಸಲು ಸಾಧ್ಯವಾಗಲಿಲ್ಲ.
- ಮಹಿಳಾ ಮತದಾರರಲ್ಲಿ ವಿಫಲತೆ
ಎನ್ಡಿಎ ಮಹಿಳೆಯರಿಗೆ ₹10,000 ಸಹಾಯವನ್ನು ಈಗಾಗಲೇ ಜಾರಿಗೆ ತಂದದ್ದರಿಂದ, ಮಹಾಘಟಬಂಧನ್ ನೀಡಿದ “ತಿಂಗಳಿಗೆ ₹2,500” ಭರವಸೆ ಮಹಿಳೆಯರಲ್ಲಿ ಅಷ್ಟೊಂದು ಪ್ರತಿಕ್ರಿಯೆ ಪಡೆಯಲಿಲ್ಲ.


