Greater Bengaluru news9 : ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನಾರಚನೆ ವಿಚಾರ ಕುತೂಹಲ ಮೂಡಿಸಿದೆ. ನವೆಂಬರ್‌ನಲ್ಲಿ ಏನಾಗುತ್ತದೆ ಎಂಬ ಚರ್ಚೆ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಕೆಎನ್ ರಾಜಣ್ಣ ತುಮಕೂರಿನ ನಿವಾಸದಲ್ಲಿ ಸಿಎಂಗೆ ಔತಣಕೂಟ ಏರ್ಪಡಿಸಿರುವ ಬೆನ್ನಲ್ಲೇ ಚರ್ಚೆಗಳು ಹೆಚ್ಚಿವೆ.
ಹೌದು ಇಂದು ಮಧ್ಯಾಹ್ನ 1 ಗಂಟೆಗೆ ವಿಧಾನಸೌಧದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಸಭೆ ನಡೆಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಳಿಕ 2 ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ತುಮಕೂರು ನಗರಕ್ಕೆ ತಲುಪಲಿದ್ದಾರೆ. ಜಿಲ್ಲೆಯ ವಿವಿಧೆಡೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ, ಉದ್ಘಾಟನೆ ನೆರವೇರಿಸಲಿದ್ದಾರೆ. ಇದಕ್ಕೂ ಮುನ್ನ ಅಂದರೆ ಮಧ್ಯಾಹ್ನ 2.30ರಿಂದ 3.30ರವರೆಗೆ ರಾಜಣ್ಣ ಅವರ ಕ್ಯಾತ್ಸಂದ್ರ ನಿವಾಸದಲ್ಲಿ ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಸಮಯವನ್ನೂ ಕಾಯ್ದಿರಿಸಲಾಗಿದೆ.
ಔತಣಕೂಟದಲ್ಲಿ ಸಿದ್ದರಾಮಯ್ಯ ಅವರು, ರಾಜಣ್ಣ ಅವರನ್ನು ಸಂಪುಟಕ್ಕೆ ಮರಳಿ ಸೇರ್ಪಡೆಗೊಳಿಸುವ ಕುರಿತು ಮಾತುಕತೆ ನಡೆಸಬಹುದು ಎಂದು ಮೂಲಗಳು ತಿಳಿಸಿವೆ. ಈ ನಡುವೆ ನವೆಂಬರ್ 15 ರಂದು ಮುಖ್ಯಮಂತ್ರಿಗಳು ದೆಹಲಿಗೆ ಭೇಟಿ ನೀಡಲಿದ್ದು, ಈ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಂಪುಟ ಪುನರ್ರಚನೆಗೆ ಒಪ್ಪಿಗೆ ಪಡೆಯುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಪಟ್ಟ ಉಳಿಸಿಕೊಳ್ಳಲು ಅಹಿಂದ ಅಸ್ತ್ರ ಹೂಡಲಾಗಿದೆ ಎಂಬ ಚರ್ಚೆಗಳ ಮಧ್ಯೆ, ಸಿಎಂ ಬದಲಾವಣೆ ಆದರೆ ದಲಿತರಿಗೆ ಸಿಎಂ ಸ್ಥಾನ ಸಿಗಬೇಕು ಎಂಬ ಒತ್ತಡ ಹೇರುವ ಬಗ್ಗೆಯೂ ದಲಿತ ಸಚಿವರು ಚರ್ಚಿಸಿದ್ದಾರೆ.ಒಟ್ಟಾರೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಮತ್ತು ಸಂಪುಟ ಪುನಾರಚನೆ ವಿಚಾರ ನವೆಂಬರ್‌ನಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


